ವಿದೇಶ

ಫೆಬ್ರವರಿ 24 ರಂದು ಭಾರತಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ

Srinivasamurthy VN

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೆ ತಿಂಗಳ 24-25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಮಂಗಳವಾರ ದೃಢಪಡಿಸಿದೆ.

ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್‌ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಆಗಮಿಸಲಿದ್ದಾರೆ. ಟ್ರಂಪ್ ಅವರು ಅಹಮದಾಬಾದಿಗೂ ಸಹ ಭೇಟಿ ನೀಡಲಿದ್ದಾರೆ. ಅಧ್ಯಕ್ಷರು ಮತ್ತು ಅಮೆರಿಕದ ಪ್ರಥಮ ಮಹಿಳೆ ನವದೆಹಲಿ ಮತ್ತು ಅಹಮದಾಬಾದ್‌ಗೆ ಪ್ರಯಾಣಿಸಲಿದ್ದು, ಇದು ಪ್ರಧಾನಿ ಮೋದಿ ತವರು ರಾಜ್ಯವಾಗಿದೆ. 

ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದ ಮಹಾತ್ಮ ಗಾಂಧೀಜಿ ಅವರು ಬಾಳಿದ ನಾಡಿನಲ್ಲಿ ಡೊನಾಲ್ಡ್‌ ಟ್ರಂಪ್ ಹಾಗೂ ಮೆಲೆನಿಯಾ ಭೇಟಿ ನೀಡಲಿದ್ದಾರೆ ಎಂದು ಶ್ವೇತ ಭವನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಭಾರತ ಭೇಟಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಉತ್ತಮಗೊಳಿಸಲಿದ್ದು, ಎರಡು ದೇಶಗಳಲ್ಲಿನ ಜನರಿಗೂ ಅನುಕೂಲಕರವಾಗಲಿದೆ ಎಂದು ಶ್ವೇತ ಭವನದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಅಮೆರಿಕದ ಹೂಸ್ಟನ್‌ನಲ್ಲಿ "ಹೌಡಿ ಮೋದಿ" ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ರೀತಿ ಗುಜರಾತ್‌ನಲ್ಲಿ ಟ್ರಂಪ್‌ಗಾಗಿ ಕೆಮ್‌ ಚೋ ಟ್ರಂಪ್‌ (ಗುಜರಾತಿಯಲ್ಲಿ ಹೇಗಿದ್ದೀರಿ ಎಂಬರ್ಥ) ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. 

ಇನ್ನು ಪ್ರಧಾನಿ ಮೋದಿ ಹಾಗೂ ಟ್ರಂಪ್‌ ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಅಹಮದಾಬಾದ್‌ ಭೇಟಿ ಹೊರತುಪಡಿಸಿ ಉಳಿದ ಕಾರ್ಯಕ್ರಮಗಳ ಕುರಿತು ಶ್ವೇತಭವನ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. 

SCROLL FOR NEXT