ವಿದೇಶ

ಕರಾಚಿ ಬಂದರಿನಲ್ಲಿ ನಿಗೂಢ ವಿಷಾನಿಲ ಸೋರಿಕೆ, ಕನಿಷ್ಠ 14 ಸಾವು

Srinivasamurthy VN

ಕರಾಚಿ: ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲಿ ನಿಗೂಢ ವಿಷಾನಿಲ ಸೋರಿಕೆ ಪರಿಣಾಮ ಕನಿಷ್ಠ 14 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥರಾಗಿದ್ದಾರೆ. 

ಕರಾಚಿಯ ಕೇಮಾರಿ ಬಂದರು ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ14 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 25ಕ್ಕೂ ಅಧಿಕ ಮಂದಿಯಲ್ಲಿ ಗಂಭೀರ ಉಸಿರಾಟದ ಸಮಸ್ಯೆ ಅರಂಭವಾಗಿದ್ದು, ಎಲ್ಲರನ್ನೂ ಸಮೀಪದ ಜಿಯಾವುದ್ದೀನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತಂತೆ ಆಸ್ಪತ್ರೆ ವಕ್ತಾರ ಆಮೀರ್​ ಶೆಹಜಾದ್ ಹೇಳಿಕೆ ಬಿಡುಗಡೆ ಮಾಡಿದ್ದು, ಕಳೆದ ಎರಡು ದಿನಗಳ ಅವಧಿಯಲ್ಲಿ ಆಸ್ಪತ್ರೆ ದಾಖಲಾದವರ ಪೈಕಿ 9 ಜನ ಸಾವನ್ನಪ್ಪಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಕೌಟಿನ್ಯ ಆಸ್ಪತ್ರೆಗೆ ದಾಖಲಾಗಿದ್ದವರ ಪೈಕಿ ಇಬ್ಬರು ಮೃತಪಟ್ಟಿದ್ದು, ಮಂಗಳವಾರ ಇನ್ನೂ ಮೂವರು ಮೃತ ಪಟ್ಟಿದ್ದು ಮೃತರ ಸಂಖ್ಯೆ 14ಕ್ಕೇರಿದೆ.

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕರಾಚಿ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮೋನ್ ಅವರು, ಈ ವಿಷಾನಿಲ ಹರಡುವುದಕ್ಕೆ ಕಾರಣವಾಗಿದ್ದೇನು ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ಮುಂದುವರಿದಿದ್ದು, ಜನರು ಅಸ್ವಸ್ಥರಾಗುವುದಕ್ಕೆ ಸರಿಯಾದ ಕಾರಣವನ್ನು ಪತ್ತೆಹಚ್ಚಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT