ವಿದೇಶ

'ಭಾರತ-ಅಮೆರಿಕ ವ್ಯಾಪಾರ ಒಪ್ಪಂದ' ಸದ್ಯಕ್ಕೆ ಏರ್ಪಡುವುದು ಸಂಶಯ:ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು? 

Sumana Upadhyaya

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಭಾರತಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಭಯ ದೇಶಗಳ ಮಧ್ಯೆ ನಡೆಯಬಹುದಾದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಆರ್ಥಿಕ, ಉದ್ಯಮ ಮತ್ತು ಭಾರತ-ಅಮೆರಿಕ ಮಾಧ್ಯಮ ವಲಯಗಳಲ್ಲಿ ಬಹು ಚರ್ಚೆಗೆ ಒಳಪಡುತ್ತಿದೆ. 

ಈ ವರ್ಷಾಂತ್ಯಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿರುವುದರಿಂದ ಒಪ್ಪಂದಕ್ಕೆ ಇನ್ನಷ್ಟು ಮಹತ್ವ ಸಿಕ್ಕಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರ ಭೇಟಿ ವೇಳೆಯೇ ವ್ಯಾಪಾರ ಒಪ್ಪಂದ ಏರ್ಪಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಸ್ವತಃ ಟ್ರಂಪ್ ಅವರೇ ನೀಡಿರುವ ಹೇಳಿಕೆ ಪ್ರಕಾರ ಭಾರತ-ಅಮೆರಿಕ ಮಧ್ಯೆ ಸದ್ಯದಲ್ಲಿ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆಗಳಿಲ್ಲ.ಅದು ತಮ್ಮ ಭೇಟಿ ಸಂದರ್ಭದಲ್ಲಂತೂ ಇಲ್ಲ ಎಂಬುದು ಅವರು ನಿನ್ನೆ ಆಡಿರುವ ಮಾತುಗಳಿಂದ ಸ್ಪಷ್ಟವಾಗಿದೆ.

ಭಾರತದ ಜೊತೆಗೆ ನಾವು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುತ್ತೇವೆ ಆದರೆ ಅದು ಸದ್ಯಕ್ಕಿಲ್ಲ, ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಭಾರತೀಯ ಕಾಲಮಾನ ನಿನ್ನೆ ಅಪರಾಹ್ನ ಅವರು ಜಾಯಿಂಟ್ ಬೇಸ್ ಆಂಡ್ರ್ಯೂಸ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಹೇಳಿದರು. ನಿಮ್ಮ ಭಾರತ ಭೇಟಿಗೆ ಮುನ್ನ ವ್ಯಾಪಾರ ಒಪ್ಪಂದ ಏರ್ಪಡಬಹುದೇ ಎಂದು ಸುದ್ದಿಗಾರರು ಕೇಳಿದಾಗ, ಖಂಡಿತವಾಗಿಯೂ ನಾವು ಭಾರತ ಜೊತೆಗೆ ಬಹಳ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ, ಅದು ಅಧ್ಯಕ್ಷೀಯ ಚುನಾವಣೆಗೆ ಮೊದಲು ಆಗುತ್ತದೆಯೇ, ಇಲ್ಲವೇ ಎಂದು ನನಗೆ ಗೊತ್ತಿಲ್ಲ, ಅದೊಂದು ದೊಡ್ಡ ಒಪ್ಪಂದ ಎಂದು ಹೇಳಬಲ್ಲೆ ಎಂದರು. ಅಂದರೆ ಮುಂದಿನ ವಾರ ಅವರ ಭೇಟಿ ವೇಳೆ ವ್ಯಾಪಾರ ಒಪ್ಪಂದದ ಮಾತುಕತೆಯೇ ಇಲ್ಲವೆಂದು ಸ್ಪಷ್ಟವಾಯಿತು.

ಭಾರತದ ಜೊತೆಗೆ ವ್ಯಾಪಾರ ಒಪ್ಪಂದದ ಕೇಂದ್ರ ವ್ಯಕ್ತಿಯಾಗಿರುವ ಅಮೆರಿಕಾ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಜರ್ ಅವರು ಮುಂದಿನ ವಾರ ಡೊನಾಲ್ಡ್ ಟ್ರಂಪ್ ಅವರ ಜೊತೆ ಭಾರತಕ್ಕೆ ಬರುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗೆಂದು ಅಧಿಕಾರಿಗಳು ಒಪ್ಪಂದ ಬಗ್ಗೆ ಎಲ್ಲ ಸಾಧ್ಯತೆಗಳನ್ನು ತಳ್ಳಿ ಹಾಕಿಲ್ಲ.

ವ್ಯಾಪಾರ ಒಪ್ಪಂದ ವಿಚಾರದಲ್ಲಿ ಇದುವರೆಗೆ ಭಾರತದ ಜೊತೆಗೆ ಆದ ಚರ್ಚೆಗಳು ಅಮೆರಿಕಕ್ಕೆ ಸಮಾಧಾನ ತಂದಿಲ್ಲ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಭಾರತ ನಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಟ್ರಂಪ್ ಅವರೇ ಹೇಳಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದು ಭಾರತ ಭೇಟಿಗೆ ಕಾತುರನಾಗಿದ್ದೇನೆ, ಉತ್ಸುಕತೆಯಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ದೆಹಲಿ ಬಳಿಕ ಗುಜರಾತ್ ಗೆ ಭೇಟಿ ಕೊಟ್ಟು ಅಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಕಾರ್ಯಕ್ರಮ ನಡೆಯುವ ಮೊಟೆರಾ ಕ್ರೀಡಾಂಗಣಕ್ಕೆ ಸಾಗುವಾಗ ಸುಮಾರು 70 ಲಕ್ಷ ಮಂದಿ ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಅಲ್ಲಿ ಸರ್ದಾರ್ ವಲ್ಲಭಬಾಯಿ ಕ್ರೀಡಾಂಗಣ ಉದ್ಘಾಟಿಸಲಿದ್ದು ಇದು ಜಗತ್ತಿನಲ್ಲಿಯೇ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಳ್ಳಲಿದೆ. ಪ್ರಸ್ತುತ ಇದರ ಕಾಮಗಾರಿ ಪೂರ್ಣವಾಗಿಲ್ಲ. ಅಮೆರಿಕಕ್ಕೆ ನರೇಂದ್ರ ಮೋದಿಯವರು ಭೇಟಿ ನೀಡಿದ್ದಾಗ ಆಗಿದ್ದ ಹೌಡಿ-ಮೋದಿ ಕಾರ್ಯಕ್ರಮ ಮಾದರಿಯಲ್ಲಿ ಅಹ್ಮದಾಬಾದ್ ನಲ್ಲಿ ಮುಂದಿನ ವಾರ 'ನಮಸ್ತೆ ಟ್ರಂಪ್' ಕಾರ್ಯಕ್ರಮ ನಡೆಯಲಿದೆ ಎನ್ನಲಾಗುತ್ತಿದೆ. 

SCROLL FOR NEXT