ವಿದೇಶ

ಕಟ್‌ ಕಾಪಿ ಪೇಸ್ಟ್‌ ಸಂಶೋಧಕ ಲ್ಯಾರಿ ಟೆಸ್ಲರ್ ನಿಧನ

Srinivasamurthy VN

ನ್ಯೂಯಾರ್ಕ್‌: ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ 'ಕಟ್‌, ಕಾಪಿ, ಪೇಸ್ಟ್‌’ ಎಂಬ ಪರಿಕಲ್ಪನೆಯನ್ನು ಕಂಪ್ಯೂಟರ್‌ ಜಗತ್ತಿಗೆ ಪರಿಚಯಿಸಿದ ಕಂಪ್ಯೂಟರ್‌ ವಿಜ್ಞಾನಿ ಲ್ಯಾರಿ ಟೆಸ್ಲರ್‌(74 ವರ್ಷ) ನಿಧನರಾಗಿದ್ದಾರೆ.

ಈ ಕುರಿತಂತೆ ಲ್ಯಾರಿ ಟೆಸ್ಲರ್ ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದು, ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.

1973ರಲ್ಲಿ ಕ್ಸೆರಾಕ್ಸ್‌ ಪಾಲೋ ಆಲ್ಟೋ ರಿಸರ್ಚ್‌ ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ ಟೆಸ್ಲರ್‌ ಅವರು ಕಟ್‌, ಕಾಪಿ ಮತ್ತು ಪೇಸ್ಟ್‌ ಅನ್ನು ಸಂಶೋಧಿಸಿದ್ದರು. ನಂತರದಲ್ಲಿ, ಟೆಕ್ಸ್ಟ್ ಎಡಿಟರ್ಸ್‌ ಮತ್ತು ಆರಂಭಿಕ ಕಂಪ್ಯೂಟರ್‌ ಆಪರೇಟಿಂಗ್‌ ಸಿಸ್ಟಂಗಳ ಅಭಿವೃದ್ಧಿಯಲ್ಲಿ ಇವರ ಈ ಸಂಶೋಧನೆಯೇ ಪ್ರಮುಖ ಪಾತ್ರ ವಹಿಸಿತ್ತು.

70ರ ದಶಕದಲ್ಲಿ  ಆ್ಯಪಲ್​ ಕಂಪ್ಯೂಟರ್​ ಅಭಿವೃದ್ಧಿ ಮಾಡಲು ಟೆಸ್ಲರ್​ ಸಾಕಷ್ಟು ಕೊಡುಗೆ ನೀಡಿದ್ದರು. 1970ರ ವೇಳೆ ಕ್ಸೆರಾಕ್ಸ್​ ಪಾಲೋ ಆಲ್ಟೋ ಸಂಶೋಧನಾ ಕೇಂದ್ರದಲ್ಲಿ ಕೆಲಸ ಮಾಡುವಾಗ ಕಾಪಿ-ಕಟ್-ಪೇಸ್ಟ್​ ಫಂಕ್ಷನ್​​ಅನ್ನು ಅವರು ಅನ್ವೇಷಣೆ ಮಾಡಿದ್ದರು. ಟೆಸ್ಲರ್​ 20 ವರ್ಷಗಳ ಕಾಲ ಆ್ಯಪಲ್​ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಲಿಸಾ, ಮ್ಯಾಸಿಂತೋಷ್​ ಮತ್ತು ನ್ಯೂಟನ್​ ಕಂಪ್ಯೂಟರ್​ನ ಇಂಟರ್​ಫೇಸ್​ ಡಿಸೈನ್​ ಮಾಡುವಲ್ಲಿ ಇವರ ಕೊಡುಗೆ ದೊಡ್ಡದಿದೆ. 1976ರಲ್ಲಿ ಬ್ರೌಸರ್ ಶಬ್ದವನ್ನು ಹುಟ್ಟು ಹಾಕಿದ್ದು ಇವರೇ.

1997ರಲ್ಲಿ ಟೆಸ್ಲರ್​ ಆ್ಯಪಲ್​ ಸಂಸ್ಥೆಯನ್ನು ತೊರೆದರು. 2011ರಲ್ಲಿ ಅಮೆಜಾನ್​ ಜೊತೆ ಕೈ ಜೋಡಿಸಿದ್ದರು. ಇದಕ್ಕೂ ಮೊದಲು ಅವರು ಯಾಹೂ ಸಂಸ್ಥೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ಟೆಸ್ಲರ್​ ಸಾವಿಗೆ ಕ್ಸೆರಾಕ್ಸ್​, ಆ್ಯಪಲ್​ ಸೇರಿ ಸಾಕಷ್ಟು ದೊಡ್ಡ ದೊಡ್ಡ ಸಂಸ್ಥೆಗಳು ಸಂತಾಪ ಸೂಚಿಸಿವೆ. ತಾಂತ್ರಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಇಂದಿಗೂ ಸ್ಮರಿಸುತ್ತಿದ್ದಾರೆ.

SCROLL FOR NEXT