ವಿದೇಶ

ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದಕ್ಕೂ ಮುನ್ನ ಅಫ್ಘಾನಿಸ್ತಾನಕ್ಕೆ ಭಾರತದ ಅಧಿಕಾರಿ ಭೇಟಿ!

Srinivas Rao BV

ಕಾಬೂಲ್: ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದಕ್ಕೂ ಮುನ್ನ ಅಫ್ಘಾನಿಸ್ತಾನಕ್ಕೆ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಭೇಟಿ ನೀಡಿದ್ದಾರೆ.

ಫೆ.29 ರಂದು ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದ ನಡೆಯಲಿದ್ದು, ಇದಕ್ಕೆ ಒಂದು ದಿನ ಮುಂಚಿತವಾಗಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವರನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಈ ವೇಳೆ ಶಾಂತಿ ಒಪ್ಪಂದದ ಕುರಿತು ಭಾರತದ ನಿಲುವು, ಅಫ್ಘಾನಿಸ್ತಾನದ ಸಮಗ್ರ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ತಿಳಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ಬಗ್ಗೆ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದು, ಉಭಯ ನಾಯಕರು ದ್ವಿಪಕ್ಷೀಯ ಕಾರ್ಯತಂತ್ರ ಪಾಲುದಾರಿಗೆ ಅಭಿವೃದ್ಧಿಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.

ದೋಹಾದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಬಿಳಲಿದ್ದು, ಪರಿಣಾಮ 18 ವರ್ಷಗಳ ಬಳಿಕ ಅಫ್ಘಾನಿಸ್ತಾನದಿಂದ ಅಮೆರಿಕಾದ ಸೇನಾ ತುಕಡಿಗಳು ವಾಪಸ್ ತೆರಳಲಿವೆ. ಭಾರತ ಅಫ್ಘಾನಿಸ್ತಾನದ ಜನತೆಗೆ ಸುಸ್ಥಿರ ಶಾಂತಿ, ಭದ್ರತೆ ಅಭಿವೃದ್ಧಿ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂಬ ಸಂದೇಶವನ್ನು ವಿದೇಶಾಂಗ ಕಾರ್ಯದರ್ಶಿ ರವಾನೆ ಮಾಡಿದ್ದಾರೆ ಎಂದು ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. 

ಅಫ್ಘಾನಿಸ್ತಾನ ಶಾಂತಿ ಹಾಗೂ ಸಾಮರಸ್ಯ ಪ್ರಕ್ರಿಯೆಗೆ ಮಧ್ಯಸ್ಥಿಕೆ ವಹಿಸುವಲ್ಲಿ ಭಾರತದ ಪಾತ್ರ ಪ್ರಮುಖವಾಗಿದೆ. ಶಾಂತಿ ಒಪ್ಪಂದದ ವೇಳೆ ಕತಾರ್ ನಲ್ಲಿರುವ ಭಾರತದ ರಾಯಭಾರಿ ಪಿ.ಕುಮಾರನ್ ಸಹ ಭಾಗಿಯಾಗಲಿದ್ದಾರೆ. ತಾಲಿಬಾನ್ ಉಪಸ್ಥಿತಿ ಇರುವ ಒಪ್ಪಂದದಲ್ಲಿ ಇದೇ ಮೊದಲ ಬಾರಿಗೆ ಭಾರತದ ಅಧಿಕಾರಿಯೊಬ್ಬರು ಅಧಿಕೃತವಾಗಿ ಭಾಗಿಯಾಗುತ್ತಿದ್ದಾರೆ.

SCROLL FOR NEXT