ಬಾಗ್ದಾದ್: ಮಧ್ಯ ಬಾಗ್ದಾದ್ನ ಭಾರಿ ಭದ್ರತೆಯ ಹಸಿರು ವಲಯದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಬಳಿ ಮೂರು ಕತ್ಯುಶಾ ರಾಕೆಟ್ಗಳು ಅಪ್ಪಳಿಸಿವೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮಧ್ಯರಾತ್ರಿ ಮೂರು ರಾಕೆಟ್ಗಳು ಹಸಿರು ವಲಯದ ಅಮೆರಿಕ ರಾಯಭಾರಿ ಕಚೇರಿಯ ಬಳಿ ಅಪ್ಪಳಿಸಿವೆ. ಈ ಪ್ರದೇಶದಲ್ಲಿ ಇರಾಕಿನ ಪ್ರಮುಖ ಸರ್ಕಾರಿ ಕಚೇರಿಗಳಿವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ತಿಳಿಸಿದರು. ಸಾವು-ನೋವುಗಳ ಬಗ್ಗೆ ತಕ್ಷಣ ಮಾಹಿತಿ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.
ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸೊಲೈಮನಿಯನ್ನು ಅಮೆರಿಕ ಹತ್ಯೆ ಮಾಡಿದ ಬಳಿಕ ಎರಡು ರಾಷ್ಟ್ರಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಇರಾನ್ ಅಮೆರಿಕ ವಾಯುನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಬಾಗ್ದಾದ್ನ ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್ ಜೋನ್ಅನ್ನು ಗುರಿಯಾಗಿಸಿಕೊಂಡು ರಾಕೆಟ್ ದಾಳಿ ನಡೆಸಲಾಗಿದೆ.
ರಾಕೆಟ್ಗಳು ಅಪ್ಪಳಿಸಿದ ಕೂಡಲೇ ಗ್ರೀನ್ ಜೋನ್ನಲ್ಲಿ ಸೈರನ್ ಕೂಗಲು ಆರಂಭಿಸಿತ್ತು. ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿಲ್ಲ. ಇತ್ತೀಚೆಗೆ ಅಮೆರಿಕ ರಾಯಭಾರಿ ಕಚೇರಿಯ ಗ್ರೀನ್ ಜೋನ್ ಮೇಲೆ ಇರಾನ್ ಬೆಂಬಲಿತ ಪ್ಯಾರಾ ಮಿಲಿಟರಿ ಪಡೆಯು ಇದೇ ರೀತಿ ದಾಳಿ ನಡೆಸಿತ್ತು ಎಂದು ಅಮೆರಿಕ ಆರೋಪಿಸಿದೆ.