ವಿದೇಶ

'ಕೊರೊನಾ' ದಾಳಿ : 'ಜಾಗತಿಕ ತುರ್ತು' ಘೋಷಿಸಿದ ವಿಶ್ವ ಆರೋಗ್ಯ ಸಂಘಟನೆ, ಚೀನಾದಲ್ಲಿ ಮೃತರ ಸಂಖ್ಯೆ 213ಕ್ಕೆ ಏರಿಕೆ

Sumana Upadhyaya

ವುಹಾನ್(ಚೀನಾ): ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 213ಕ್ಕೆ ಏರಿಕೆಯಾಗಿ ವಿದೇಶಗಳಿಗೂ ವೈರಸ್ ವ್ಯಾಪಿಸಿರುವ ಹಿನ್ನಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಜಾಗತಿಕ ತುರ್ತು ಘೋಷಿಸಿದೆ.


ಸ್ವಿಡ್ಜರ್ಲ್ಯಾಂಡ್ ನ ಜಿನಿವಾದಲ್ಲಿರುವ ವಿಶ್ವ ಆರೋಗ್ಯ ಸಂಘಟನೆ ಆರಂಭದಲ್ಲಿ ಕೊರೊನಾ ವೈರಸ್ ನಿಂದ ಜಾಗತಿಕವಾಗಿ ಅಪಾಯವಿದೆ ಎಂಬ ಎಚ್ಚರಿಕೆಯನ್ನು ತಳ್ಳಿಹಾಕಿತ್ತು. ಆದರೆ ಕಳೆದ ನಾಲ್ಕೈದು ದಿನಗಳ ಅಪಾಯದ ಮೌಲ್ಯಮಾಪನವನ್ನು ಪರಿಷ್ಕರಿಸಿ ಜಾಗತಿಕ ಮಟ್ಟದಲ್ಲಿ ವೈರಸ್ ನಿಂದ ಜಾಗೃತೆ ವಹಿಸುವಂತೆ ದೇಶಗಳಿಗೆ ಎಚ್ಚರಿಕೆ ನೀಡಿದೆ.


ಕಳಪೆ ಆರೋಗ್ಯ ಸೇವೆ ವ್ಯವಸ್ಥೆಯಿರುವ ದೇಶಗಳಿಗೆ ಸಹ ವೈರಸ್ ಹರಡಬಹುದೆಂದು ನಮಗೆ ತೀವ್ರ ಆತಂಕವಿದೆ. ಇನ್ನಷ್ಟು ಹರಡದಂತೆ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.


ಕೊರೊನಾ ವೈರಸ್ 15ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು ಚೀನಾ ದೇಶದೊಂದಿಗೆ ಪ್ರಯಾಣ ಮತ್ತು ವ್ಯಾಪಾರಕ್ಕೆ ಸದ್ಯಕ್ಕೆ ನಿರ್ಬಂಧ ಹೇರಿವೆ. ಆದರೆ ಈ ರೀತಿ ಮಾಡುವುದು ಅನಗತ್ಯ, ಇದರಿಂದ ವೈರಸ್ ತಡೆಯಲು ಸಾಧ್ಯವಿಲ್ಲ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಿದರಷ್ಟೆ ವೈರಸ್ ಹರಡುವುದನ್ನು ಕಡಿಮೆ ಮಾಡಬಹುದು ಎಂದು ಟೆಡ್ರೊಸ್ ಹೇಳಿದ್ದಾರೆ. ಅವರು ಚೀನಾಕ್ಕೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. 

ಈಗಾಗಲೇ ಹಲವು ದೇಶಗಳು ಚೀನಾಕ್ಕೆ ಹೋಗಬೇಡಿ ಎಂದು ತನ್ನ ನಾಗರಿಕರಿಗೆ ಹಲವು ದೇಶಗಳ ಸರ್ಕಾರಗಳು ಒತ್ತಾಯಿಸುತ್ತಿದ್ದು ಚೀನಾದ ಕೇಂದ್ರ ನಗರ ವುಹಾನ್ ನಿಂದ ಪ್ರಯಾಣಿಕರು ತಮ್ಮ ದೇಶಕ್ಕೆ ಪ್ರಯಾಣಿಸುವುದನ್ನು ಸಹ ತಡೆದಿವೆ. ಇಲ್ಲಿಯೇ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಂಡು ಜನರು ಮೃತಪಟ್ಟಿರುವುದು.


ವುಹಾನ್ ಗೆ ಭೇಟಿ ಕೊಟ್ಟಿದ್ದ ತನ್ನ ಪತ್ನಿಯಿಂದ ಕೊರೊನಾ ವೈರಸ್ ಸೋಂಕು ತನಗೆ ಹರಡಿದೆ ಎಂದು ಅಮೆರಿಕಾದ ಚಿಕಾಗೊ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.

ಚೀನಾಕ್ಕೆ ಪ್ರಯಾಣಿಸುವ ಏರ್ ಫ್ರಾನ್ಸ್, ಬ್ರಿಟಿಷ್ ಏರ್ ವೇಸ್ ಮತ್ತು ಲುಫ್ತಾನ್ಸ ತಮ್ಮ ಸೇವೆಯನ್ನು ಆ ದೇಶಕ್ಕೆ ತಾತ್ಕಾಲಿಕವಾಗಿ ರದ್ದುಪಡಿಸಿವೆ.ಇಸ್ರೇಲ್, ರಷ್ಯಾ ದೇಶಗಳು ಸಹ ನಾಗರಿಕರ ಪ್ರಯಾಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿವೆ. 

ಚೀನಾ ಸರ್ಕಾರ ಮತ್ತೆ 43 ಮಂದಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು ಈ ಮೂಲಕ ಚೀನಾದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 213ಕ್ಕೇರಿದೆ. ನಿನ್ನೆ ದೃಢಪಟ್ಟಲ್ಪಟ್ಟ ಇಬ್ಬರ ಸಾವು ಹುಬೈ ಪ್ರಾಂತ್ಯದಲ್ಲಿ ಆಗಿದೆ. 1,982 ಮಂದಿ ಹೊಸಬರಲ್ಲಿ ಕೊರೊನಾ ವೈರಸ್ ಕಂಡುಬಂದು ಸೋಂಕು ತಗುಲಿದವರ ಸಂಖ್ಯೆ 10 ಸಾವಿರಕ್ಕೆ ಏರಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.1 ಲಕ್ಷಕ್ಕೂ ಅಧಿಕ ಮಂದಿಯನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. 

SCROLL FOR NEXT