ವಿದೇಶ

ಕೋವಿಡ್-19 ಲಸಿಕೆಗೆ ಗ್ಲೋಬಲ್ ರೇಸ್: ನೌಕರರನ್ನೇ ಪರೀಕ್ಷೆಗೆ ಬಳಸಿಕೊಳ್ಳುತ್ತಿರುವ ಚೀನಾ ಸಂಸ್ಥೆ

Srinivas Rao BV

ಬೀಜಿಂಗ್: ಕೋವಿಡ್-19 ಲಸಿಕೆ ಕಂಡುಹಿಡಿಯುವುದಕ್ಕೆ ಜಾಗತಿಕ ಮಟ್ಟದಲ್ಲಿ ಪೈಪೋಟಿ ಪ್ರಾರಂಭವಾಗಿದ್ದು, ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ತನ್ನ ನೌಕರರನ್ನೇ ಪರೀಕ್ಷೆಗೆ ಬಳಸಿಕೊಳ್ಳುತ್ತಿದೆ.

ಉನ್ನತ ಮಟ್ಟದ ಅಧಿಕಾರಿಗಳಿಂದ ಹಿಡಿದು ನೌಕರರು, ಜನರ ಮೇಲೆ ಲಸಿಕೆ ಪ್ರಯೋಗಕ್ಕೆ ಸರ್ಕಾರದ ಅನುಮತಿ ದೊರೆಯುವುದಕ್ಕೂ ಮುನ್ನವೇ ಪರೀಕ್ಷಾರ್ಥ ಲಸಿಕೆಗಳನ್ನು ಸ್ವೀಕರಿಸಿದ್ದಾರೆ.

"ಕೊರೋನಾ ವಿರುದ್ಧ ಹೋರಾಟದಲ್ಲಿ ಸಹಾಯ ಹಸ್ತ ಎಂದು ಈ ಕುರಿತ ವಿವರಣೆಯಲ್ಲಿ ಸಿನೋಫಾರ್ಮ್ ಆನ್ ಲೈನ್ ನಲ್ಲಿ ತಿಳಿಸಿದ್ದು, ಪ್ರೀ-ಟೆಸ್ಟ್ ಲಸಿಕೆಗಳನ್ನು ಸ್ವೀಕರಿಸುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ನೌಕರರ ಈ ನಡೆ ಧೀರೋದಾತ್ತ ತ್ಯಾಗ ಎಂದರೂ ಅಥವಾ ಅಂತಾರಾಷ್ಟ್ರೀಯ ನೈತಿಕ ನಿಯಮಗಳ ಉಲ್ಲಂಘನೆ ಎಂದರೂ ವೈಜ್ಞಾನಿಕವಾಗಿ ಹಾಗೂ ರಾಜಕೀಯವಾಗಿ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುವುದಕ್ಕಾಗಿ ಕೊರೋನಾಗೆ ಮೊದಲು ಲಸಿಕೆ ಕಂಡುಹಿಡಿಯುವುದಕ್ಕೆ ಪೈಪೋಟಿ ನಡೆಯುತ್ತಿದೆ.

ಕೊರೋನಾಗೆ ಲಸಿಕೆ ಕಂಡುಹಿಡಿಯುವುದು, ಚಂದ್ರನಿಗಾಗಿ ಅಮೆರಿಕ-ರಷ್ಯಾ ನಡುವಿದ್ದ ಪೈಪೋಟಿಗಿಂತಲೂ ತೀವ್ರವಾದ ಪೈಪೋಟಿಯಾಗಿ ಮಾರ್ಪಾಡಾಗಿದೆ ಎಂದು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಸಾರ್ವಜನಿಕ ಆರೋಗ್ಯ ಕಾನೂನು ತಜ್ಞ ಲಾರೆನ್ಸ್ ಗೋಸ್ಟಿನ್ ಹೇಳಿದ್ದಾರೆ. ಎರಡು ಡಜನ್ ಸಂಭಾವ್ಯ ಲಸಿಕೆಗಳ ಪೈಕಿ ಮನುಷ್ಯನ ಮೇಲೆ ವಿವಿಧ ಹಂತಗಳಲ್ಲಿ ಪ್ರಯೋಗ ಮಾಡಲ್ಪಡುತ್ತಿರುವ 8 ಲಸಿಕೆಗಳು ಚೀನಾದ್ದೇ ಆಗಿದೆ. ಸಿನೋ ಫಾರ್ಮ್ ಹಾಗೂ ಚೀನಾದ ಮತ್ತೊಂದು ಸಂಸ್ಥೆ ಈಗಾಗಲೇ ಅಂತಿಮ ಹಂತದ ಪರೀಕ್ಷೆ ನಡೆಸುತ್ತಿರುವುದಾಗಿ ಘೋಷಿಸುತ್ತಿವೆ.

SCROLL FOR NEXT