ವಿದೇಶ

ಭಾರೀ ನಿರುದ್ಯೋಗ ಸಮಸ್ಯೆ ನಡುವೆ ಹೆಚ್-1 ಬಿ ವೀಸಾಗಳ ಅಮಾನತಿಗೆ ಟ್ರಂಪ್ ಚಿಂತನೆ- ವರದಿ

Nagaraja AB

ವಾಷಿಂಗ್ಟನ್:  ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣ ಅಮೆರಿಕಾದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿರುವಂತೆ ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆಯಿರುವ ಎಚ್ -1 ಬಿ ಸೇರಿದಂತೆ ಹಲವಾರು ಉದ್ಯೋಗ ವೀಸಾಗಳನ್ನು ಅಮಾನತುಗೊಳಿಸುವ ಬಗ್ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ ಎಂಬುದು ವರದಿಗಳಿಂದ ತಿಳಿದುಬಂದಿದೆ.

ಪ್ರಸ್ತಾವಿತ ಅಮಾನತು ಅನೇಕ ವೀಸಾಗಳನ್ನು ನೀಡಲಾಗುವ ಅಕ್ಟೋಬರ್ 1 ರಿಂದ ಸರ್ಕಾರದ ಹೊಸ ಹಣಕಾಸು ವರ್ಷಕ್ಕೆ ವಿಸ್ತರಿಸಬಹುದು ಎಂದು ಹೆಸರಿಸಿದ ಆಡಳಿತಾಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ  ದಿ ವಾಲ್ ಸ್ಟ್ರೀಟ್ ಜರ್ನಲ್  ವರದಿ ಮಾಡಿದೆ.

ಅಮಾನತು ತೆರವುಗೊಳಿಸುವವರೆಗೂ ಕೆಲಸಕ್ಕಾಗಿ ಹೊರಗಿನ ದೇಶದಿಂದ ಯಾವುದೇ ಹೆಚ್ -1ಬಿ ಪಾಸುದಾರರು ಬಾರದಂತೆ ತಡೆಯಬಹುದು, ಆದಾಗ್ಯೂ, ಈಗಾಗಲೇ ಅಮೆರಿಕಾದಲ್ಲಿರುವ ಪಾಸು ದಾರರಿಗೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ನಿಯತಕಾಲಿಕೆ ವರದಿಯಲ್ಲಿ ಉಲ್ಲೇಖಿಸಿದೆ. ಹೆಚ್ -1 ಬಿ ಭಾರತದಿಂದ ಬರುವ  ತಂತ್ರಜ್ಞಾನ ವೃತ್ತಿಪರರಿಗೆ ಹೆಚ್ಚು ಅಪೇಕ್ಷಿತ ವಿದೇಶಿ ಕೆಲಸದ ವೀಸಾ ಆಗಿದೆ.

ಹೆಚ್-1 ಬಿ ವೀಸಾಗಳ ಅಮಾನತು ಮಾಡುವ ಟ್ರಂಪ್ ಆಡಳಿತದ ನಿರ್ಧಾರ ಸಹಸ್ರಾರು ಭಾರತೀಯ ಐಟಿ ವೃತ್ತಿಪರರ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಲಿದೆ. ಈ ಪಾಸುಗಳನ್ನು ಹೊಂದಿರುವ ಅಪಾರ ಸಂಖ್ಯೆಯ ಭಾರತೀಯರು ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದು, ಸ್ವದೇಶದತ್ತ ಮುಖ ಮಾಡಿದ್ದಾರೆ. ಆದಾಗ್ಯೂ, ಇಂತಹ ಪ್ರಸ್ತಾಪದ ಬಗ್ಗೆ ಈವರೆಗೂ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಶ್ವೇತಭವನ ತಿಳಿಸಿದೆ. 

ಪ್ರಸ್ತುತ ಟ್ರಂಪ್ ಆಡಳಿತ  ಅಮೆರಿಕದ ಕಾರ್ಮಿಕರು ಮತ್ತು ಉದ್ಯೋಗಾಕಾಂಕ್ಷಿಗಳು ವಿಶೇಷವಾಗಿ ಹಿಂದುಳಿದ ಮತ್ತು ಕಡಿಮೆ ಅರ್ಹ ನಾಗರಿಕರನ್ನು ರಕ್ಷಿಸಲು ವೃತ್ತಿ ಪರಿಣತರು ರೂಪಿಸಿರುವ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಮೌಲ್ಯಮಾಪನ ಮಾಡುತ್ತಿದೆ - ಆದರೆ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಶ್ವೇತಭವನದ ವಕ್ತಾರ ಹೊಗನ್ ಗಿಡ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಹೆಚ್-1 ಬಿ ವೀಸಾಗಳ ಜೊತೆಗೆ ಅಲ್ಪಾವಧಿಯ ಕಾಲೋಚಿತ ಕೆಲಸಗಾರರಿಗೆ ನೀಡುವ ಹೆಚ್-2ಬಿ, ಅಲ್ಪಾವಧಿಯ ಕೆಲಸಗಾರರಿಗೆ ನೀಡಲಾಗುವ ಜೆ-1, ಅಂತರಿಕ ಕಂಪನಿ ವರ್ಗಾವಣೆಗಾಗಿ ನೀಡಲಾಗುವ ಎಲ್-1 ವೀಸಾಗಳನ್ನು ಕೂಡಾ ಅಮಾನತು ನಿಯಮ ಅನ್ವಯವಾಗಲಿದೆ. 

SCROLL FOR NEXT