ವಿದೇಶ

ಭಾರತಕ್ಕೆ ಚೀನಾ ಅಪಾಯ ಎದುರಿಸಲು ಅಮೆರಿಕಾ ಪಡೆಗಳ ವರ್ಗಾವಣೆ!

Srinivas Rao BV

ಭಾರತಕ್ಕೆ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಎದುರಾಗಿರುವ ಚೀನಾ ಅಪಾಯವನ್ನು ಎದುರಿಸಲು ಅಮೆರಿಕಾ ಪಡೆಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಅಮೆರಿಕ ಸಚಿವ ಮೈಕ್ ಪೋಂಪಿಯೊ ಹೇಳಿದ್ದಾರೆ.

ಬ್ರಸಲ್ಸ್ ಫೋರಂ ಆಯೋಜಿಸಿದ್ದ ವಿಡಿಯೋ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಪೋಂಪಿಯೊ, ಜರ್ಮನಿಯಲ್ಲೇಕೆ ಅಮೆರಿಕ ಸೇನಾ ಸಿಬ್ಬಂದಿಗಳ ಇರುವಿಕೆಯನ್ನು ಕಡಿಮೆಗೊಳಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು,  ಅಮೆರಿಕ ಯುರೋಪ್ ನಿಂದ ತನ್ನ ಸೇನಾ ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿದೆಯೆಂದರೆ, ಅದಕ್ಕೆ ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರಗಳಲ್ಲಿ ಚೀನಾದಿಂದ ಎದುರಾಗಿರುವ ಅಪಾಯಗಳೂ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಿದ್ದು, ಯುರೋಪ್ ನಿಂದ ಅಮೆರಿಕಾ ಸೇನೆಗಳನ್ನು ಭಾರತ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದಿಂದ ಉಂಟಾಗಿರುವ ಅಪಾಯವನ್ನು ಎದುರಿಸಲು ನಿಯೋಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ನಡೆಗಳಿಂದ ಭಾರತಕ್ಕೆ, ವಿಯೆಟ್ನಾಮ್ ಗೆ ಮಲೇಷ್ಯಾ, ಇಂಡೋನೇಷ್ಯಾ ಹಾಗೂ ದಕ್ಷಿಣ ಚೀನಾ ಸಮುದ್ರಕ್ಕೆ ಅಪಾಯ ಎದುರಾಗುತ್ತಿದೆ. ಈ ಅಪಾಯಗಳನ್ನು ಎದುರಿಸಲು ಅಮೆರಿಕಾ ಸೇನೆಯನ್ನು ಬಳಕೆ ಮಾಡಿಕೊಳ್ಳುವುದರತ್ತ ಗಮನ ಹರಿಸಿದ್ದೇವೆ ಎಂದು ಪೋಂಪಿಯೊ ಹೇಳಿದ್ದಾರೆ. ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಮುಂದಾಗಿ, ದಕ್ಷಿಣ ಚೀನಾ ಸಮುದ್ರವನ್ನು ಮಿಲಿಟರೀಕರಣಗೊಳಿಸಿದ್ದಕ್ಕೆ ಚೀನಾವನ್ನು ದುರಳ ನಡೆ ಹೊಂದಿರುವ ರಾಷ್ಟ್ರ ಎಂದು ಪೊಂಪಿಯೋ ಜರಿದಿದ್ದರು.

ನ್ಯಾಟೋ ಸೇರಿದಂತೆ ಹಲವು ಸಾಂಸ್ಥಿಕ ರಚನೆಯ ಮೂಲಕ ಮುಕ್ತ ಪ್ರಪಂಚ ಮಾಡಿರುವ ಎಲ್ಲಾ ಅಭಿವೃದ್ಧಿಗಳನ್ನೂ ಚೀನಾದ ಕಮ್ಯುನಿಸ್ಟ್ ಪಕ್ಷ ಹಾಳುಗೆಡವಲು ಯತ್ನಿಸುತ್ತಿದ್ದು, ತನಗೆ ಸಹಕಾರಿಯಾಗಬಲ್ಲ ನಿಯಮಗಳನ್ನು ರೂಪಿಸುತ್ತಿದೆ ಎಂದು ಪೊಂಪೊಯೋ ಆರೋಪಿಸಿದ್ದಾರೆ.

SCROLL FOR NEXT