ವಿದೇಶ

ಸುಳ್ಳು ಸುದ್ದಿಯ ಪರಿಣಾಮ: ಕೊರೋನಾ ವೈರಸ್ ’ಚಿಕಿತ್ಸೆ’ಗೆ ಕಳ್ಳಬಟ್ಟಿ ಕುಡಿದು 27 ಮಂದಿ ಸಾವು! 

Srinivas Rao BV

ತೆಹ್ರಾನ್: ಕೊರೋನಾ ವೈರಸ್ ತಡೆಗೆ ಮದ್ಯಸೇವನೆ ಸಹಕಾರಿ ಎಂಬ ಸುಳ್ಳುಸುದ್ದಿ ನಂಬಿ ಕಳ್ಳಬಟ್ಟಿ ಕುಡಿದ 27 ಮಂದಿ ಸಾವನ್ನಪ್ಪಿದ್ದಾರೆ. 

ಇರಾನ್ ನಲ್ಲಿ ಈ ಘಟನೆ ನಡೆದಿದ್ದು, ಕಳ್ಳಬಟ್ಟಿಯಲ್ಲಿದ್ದ ಮೆಥನಾಲ್ ವಿಷ ಸೇವನೆಯಿಂದಾಗಿ 27 ಜನರು ಮೃತಪಟ್ಟಿದ್ದಾರೆ ಎಂದು ಇರಾನ್ ನ ಸರ್ಕಾರಿ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ.

ಚೀನಾದಿಂದ ಪ್ರಾರಂಭವಾದ ಕೊರೋನಾ ವೈರಸ್ ಇರಾನ್ ನಲ್ಲಿಯೂ ವ್ಯಾಪಕವಾಗಿ ಹರಡಿದೆ. ಮುಸ್ಲಿಮೇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಇರಾನ್ ನಲ್ಲಿ ಮದ್ಯಸೇವನೆಯನ್ನು ನಿಷೇಧಿಸಲಾಗಿದೆ. ಆದರೆ ಕೊರೋನಾ ವೈರಸ್ ನಿಂದ ಗುಣಮುಖವಾಗುವುದಕ್ಕೆ ಮದ್ಯಸೇವನೆ ಸಹಕಾರಿ ಎಂಬ ಸುಳ್ಳು ಸುದ್ದಿ ಹರಡಿತ್ತು. ಇದನ್ನೇ ನಂಬಿದ ಹಲವರು ಕಳ್ಳಬಟ್ಟಿ ಸೇವನೆ ಮಾಡಿದ್ದಾರೆ. ಈ ಪೈಕಿ ಇರಾನ್ ನ ನೈಋತ್ಯ ಪ್ರದೇಶದ ಖುಜೆಸ್ತಾನ್ ನಲ್ಲಿ 20 ಮಂದಿ  ಹಾಗೂ ಉತ್ತರ ಭಾಗದ ಅಲ್ಬೋರ್ಜ್ 7 ಮಂದಿ ಸಾವನ್ನಪ್ಪಿದ್ದಾರೆ. ಇರಾನ್ ನಲ್ಲಿ ಕೊರೋನಾ ವೈರಸ್ ಪೀಡಿತ 69 ಮಂದಿಯ ಪೈಕಿ 16 ಜನರು ಸಾವನ್ನಪ್ಪಿದ್ದಾರೆ. 

SCROLL FOR NEXT