ವಿದೇಶ

ಚೀನಾದಲ್ಲಿ ಹೊಸ ವೈರಾಣು: ’ಹಂಟಾ ವೈರಸ್’ಗೆ ಬಸ್ ನಲ್ಲೇ ಓರ್ವ ವ್ಯಕ್ತಿ ಸಾವು!

Srinivas Rao BV

ಯುನ್ನಾನ್: ಕೊರೋನಾ ವೈರಸ್ ನಿಂದ ಜಗತ್ತು ತಲ್ಲಣಿಸಿದ್ದು, ಇದರಿಂದ ಸುಧಾರಿಸಿಕೊಳ್ಳುವುದಕ್ಕೂ ಮುನ್ನವೇ ಚೀನಾದಲ್ಲಿ ಹೊಸ ವೈರಾಣುವಿನ ಸಮಸ್ಯೆ ಎದುರಾದಂತೆ ಕಾಣಿಸುತ್ತಿದೆ. 

ಚೀನಾದ ಯುನ್ನಾನ್ ನಲ್ಲಿ ಹಂಟಾ ವೈರಸ್ ಪ್ರಕರಣ ವರದಿಯಾಗಿದ್ದು, ಅಲ್ಲಿನ ಪತ್ರಿಕೆ ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಅಧಿಕೃತ ಟ್ವೀಟ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಗ್ಲೋಬಲ್ ಟೈಮ್ಸ್ ನ ಟ್ವೀಟ್ ಪ್ರಕಾರ ಶಾಂಡೊಂಗ್ ಪ್ರಾಂತ್ಯದ ಯುನ್ನಾನ್ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಓರ್ವ ವ್ಯಕ್ತಿ, ಹಂಟಾ ವೈರಸ್ ಗೆ ತುತ್ತಾಗಿ ಬಸ್ ನಲ್ಲೇ ಸಾವನ್ನಪ್ಪಿದ್ದಾನೆ. ಬಸ್ ನಲ್ಲೇ ಇದ್ದ 32 ಜನರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಇವರ ಲ್ಯಾಬ್ ರಿಪೋರ್ಟ್ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

ಹಂಟಾ ವೈರಸ್ ಇಲಿಗಳಿಂದ ಹರಡುವ ವೈರಾಣುಗಳ ಸಮೂಹವಾಗಿದ್ದು, ಗ್ಲೋಬಲ್ ಟೈಮ್ಸ್ ನ ಟ್ವೀಟ್ ವೈರಲ್ ಆಗತೊಡಗಿ ಸಾವಿರ ಸಾವಿರ ಸಂಖ್ಯೆಗಳಲ್ಲಿ ಹಂಚಿಕೆಯಾಗುತ್ತಿದೆ. ಹಂಟಾ ವೈರಸ್ ಕುರಿತು ಒಂದು ಸಮಾಧಾನಕರ ಸಂಗತಿಯೇನೆಂದರೆ ಅದು ಮನುಷ್ಯನಿಂದ ಮನುಷ್ಯನಿಗೆ ವೈರಾಣು ಹರಡುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗುತ್ತಿದೆ. 

ಇಲಿಗಳ ಮಲಮೂತ್ರಗಳಿಂದ ಇದು ಹರಡುವ ಸಾಧ್ಯತೆ ಇರುವ ಹಂಟಾ ವೈರಸ್ ಸೋಂಕಿತರಿಗೆ ವಿವಿಧ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಿದ್ದು, ಈ ಬಗ್ಗೆ ಸ್ಪಷ್ಟತೆ ಇನ್ನಷ್ಟೇ ಸಿಗಬೇಕಿದೆ. ಈ ವರೆಗೂ ಚೀನಾ ಹಾಗೂ ಅರ್ಜೆಂಟೀನಾದಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ. 

SCROLL FOR NEXT