ವಿದೇಶ

ಇತಿಹಾಸ ಸೃಷ್ಟಿಸಿದ ಸ್ಪೇಸ್ ಎಕ್ಸ್: ರಾಕೆಟ್ ಉಡಾವಣೆ ಯಶಸ್ವಿ, 9 ವರ್ಷಗಳ ಬಳಿಕ ಅಮೆರಿಕಾ ನೆಲದಿಂದ ಗಗನಯಾತ್ರೆ

Manjula VN

ಕೇಪ್ ಕೆನವೆರಲ್: ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಶನಿವಾರ ಹೊಸ ಇತಿಹಾಸ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಯಾತ್ರೆಗೆ ಖಾಸಗಿ ರಾಕೆಟ್ ಬಳಕೆ ಮಾಡಲಾಗಿದ್ದು, ಖಾಸಗಿ ಕಂಪನಿ ಸ್ಪೇಸ್ ಎಕ್ಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡು ಅಮೆರಿಕಾದ ಇಬ್ಬರು ಗಗನಯಾನಿಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತೊಯ್ದಿದೆ. 

ಖಾಸಗಿ ಕಂಪನಿ ಸ್ಪೇಸ್ ಎಕ್ಸ್ ರಾಕೆಟ್ ನಲ್ಲಿ ಅಮೆರಿಕಾ ಬಾಹ್ಯಾಕಾಶ ಸಂಸ್ಥೆಯ ಇಬ್ಬರು ಗಗನಯಾತ್ರಿಗಳು ತಡರಾತ್ರಿ (ಭಾರತೀಯ ಕಾಲಮಾನ) ಬಾಹ್ಯಾಕಾಶಕ್ಕೆ ಯಾನ ಕೈಗೊಂಡಿದ್ದಾರೆ. 

ಬಾಹ್ಯಾಕಾಶ ಯಾತ್ರೆಗೆ ಖಾಸಗಿ ರಾಕೆಟ್ ಬಳಕೆಯಾಗುತ್ತಿರುವುದು ಇದೇ ಮೊದಲು. ನಾಸಾದ ಗಗನಯಾತ್ರಿಗಳಾದ ಡೌಗ್ ಹರ್ಲಿ ಮತ್ತು ಬಾಬ್ ಬೆಹ್ನಕನ್ ಅವರನ್ನು ಹೊತ್ತು ಸ್ಪೇಸ್ ಎಕ್ಸ್'ನ ಫಾಲ್ಕನ್-9 ರಾಕೆಟ್ ಭಾರತೀಯ ಕಾಲಮಾನ ಶನಿವಾರ ತಡರಾತ್ರಿ 12.53ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ. 

ಈ ಕ್ಷಣಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಕ್ಷಿಯಾಗಿದ್ದಾರೆ. ರಾಕೆಟ್ ಬುಧವಾರವೇ ಉಡಾವಣೆಯಾಗಬೇಕಿತ್ತು. ಪ್ರತಿಕೂಲ ಹವಾಮಾನದಿಂದ ಮುಂದೂಡಿಕೆಯಾಗಿತ್ತು. 2011ರ ನಂತರ ಅಮೆರಿಕಾ ನೆಲದಿಂದ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾನವಾಗಿರುವ ಕಾರಣಕ್ಕೆ ವಿಶ್ವದ ಗಮನ ಸೆಳೆದಿದೆ. 19 ತಾಸುಗಳ ಪ್ರಯಾಣದ ಬಳಿಕ ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದ್ದಾರೆ. ಕಳೆದ 9 ವರ್ಷಗಳಿಂದ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ರಷ್ಯಾ ಮೇಲೆ ಅಮೆರಿಕಾ ಅವಲಂಬಿತವಾಗಿತ್ತು. ಪ್ರತಿಯಾನಕ್ಕೆ ರಷ್ಯಾ ರೂ.650 ಕೋಟಿ ವಿಧಿಸುತ್ತಿತ್ತು. ಆದರೆ, ಸ್ಪೇಸ್ ಎಕ್ಸ್ ರೂ.415 ಕೋಟಿ ಪಡೆಯಲಿದೆ. 

SCROLL FOR NEXT