ವಿದೇಶ

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಇನ್ನು ಘೋಷಣೆಯಾಗಿಲ್ಲ ವಿಜೇತರ ಹೆಸರು; ಮುಂದುವರಿದ ಮತ ಎಣಿಕೆ

Lingaraj Badiger

ವಾಷಿಂಗ್ಟನ್: ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಹಣಾಹಣಿ ಹೋರಾಟ ಅಂತಿಮ ಘಟ್ಟ ತಲುಪಿದ್ದು, ರಿಪಬ್ಲಿಕನ್ ಪಕ್ಷದ, ಅಮೆರಿಕ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಇಬ್ಬರೂ ಗೆಲುವಿನ ಸನಿಹದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅಧಿಕೃತವಾಗಿ ವಿಜೇತ ಅಭ್ಯರ್ಥಿಯ ಹೆಸರು ಇನ್ನು ಘೋಷಣೆಯಾಗಿಲ್ಲ.

ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್ ಮತ್ತು ಬೈಡನ್ ಇಬ್ಬರೂ ಅಮೆರಿಕದ ಪ್ರಮುಖ ರಾಜ್ಯಗಳನ್ನು ಗೆದ್ದಿದ್ದಾರೆ. ಆದರೆ ಶ್ವೇತಭವನ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು 538 ಸದಸ್ಯರ ಎಲೆಕ್ಟೋರಲ್ ಕಾಲೇಜ್ ನಿರ್ಧರಿಸಲಿದೆ. ಜಾರ್ಜಿಯಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ ಮತ್ತು ನೆವಾಡಾ ಈ ನಾಲ್ಕು ರಾಜ್ಯಗಳಲ್ಲಿನ ಫಲಿತಾಂಶಗಳು ಇನ್ನೂ ಘೋಷಣೆಯಾಗಿಲ್ಲ.

ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಲಿರುವುದು ನಿಚ್ಚಳಗೊಳ್ಳುತ್ತಿದೆ. ಈವರೆಗೆ ಬೈಡೆನ್ ಅವರು 253 ಎಲಕ್ಟ್ರೋಲ್ ಮತ ಪಡೆದುಕೊಂಡಿದ್ದು, ಟ್ರಂಪ್ 213 ಮತ ಗಳಿಸಿದ್ದಾರೆ. ಇನ್ನೂ ಮತಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಈ ಮಧ್ಯೆ, ಜಾರ್ಜಿಯಾದಲ್ಲಿ ಅಂಚೆ ಮತ ಪತ್ರಗಳ ಎಣಿಕೆ ತಡೆಯುವಂತೆ ಟ್ರಂಪ್ ಕಾನೂನು ಹೋರಾಟಕ್ಕೆ ಇಳಿಯಲಿದ್ದಾರೆ ಎಂದು ವರದಿಯಾಗಿದೆ. 

ಚುನಾವಣೆಯ ದಿನ ಸಂಜೆ 7 ಗಂಟೆಯೊಳಗೆ ಪಡೆದ ಮತ ಪತ್ರಗಳನ್ನು ಮಾತ್ರ ಎಣಿಕೆಗೆ ಪರಿಗಣಿಸಬೇಕು ಎಂದು ಜಾರ್ಜಿಯಾ ಕಾನೂನುಗಳು ಹೇಳುತ್ತವೆ ಎಂದು ರಿಪಬ್ಲಿಕನ್ ಪಕ್ಷ ಹೇಳುತ್ತಿದೆ. ಈ ಕುರಿತು ಪ್ರಕರಣ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತಿದೆ. ಈ ಕುರಿತು ನ್ಯಾಯಾಲಯ ಯಾವ ರೀತಿ ಸ್ಪಂದಿಸಲಿದೆ ಎಂದು ಹೇಳಲಾಗದು.

ಜಾರ್ಜಿಯಾದ ಕಾನೂನುಗಳನ್ನು ತಿದ್ದುಪಡಿ ಮಾಡಿ, ಅಂಚೆ ಮತ ಪತ್ರಗಳ ಮತದಾನ ಗಡುವನ್ನು ವಿಸ್ತರಿಸುವಂತೆ ಡೆಮಾಕ್ರಟಿಕ್ ಪಕ್ಷ ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಈ ಪ್ರಕರಣದಲ್ಲಿ ರಿಪಬ್ಲಿಕನ್ ಪಕ್ಷ ಗೆಲುವು ಪಡೆದುಕೊಂಡಿತ್ತು. 

SCROLL FOR NEXT