ವಿದೇಶ

ಪಾಕ್ ಗೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ! 

Srinivas Rao BV

ನವದೆಹಲಿ: ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟಾಗಿದ್ದು, ಉಗ್ರರ ಪೋಷಣೆ ನಿಲ್ಲಿಸುವಲ್ಲಿ ಪಾಕ್ ವಿಫಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force) ಹೇಳಿದೆ. 

ಎಫ್ಎಟಿಎಫ್ ನ ವರ್ಚ್ಯುಯಲ್ ಸಭೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ಫೆಬ್ರವರಿ ವರೆಗೂ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. 

ಭಾರತಕ್ಕೆ ಬೇಕಾಗಿರುವ ಇಬ್ಬರು ಪ್ರಮುಖ ಉಗ್ರರಾದ ಮೌಲಾನಾ ಮಸೂದ್ ಅಜರ್ ಹಾಗೂ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪಾಕ್ ವಿಫಲವಾಗಿದೆಯಷ್ಟೇ ಅಲ್ಲದೇ ಜಾಗತಿಕ ಹಣಕಾಸು ಕ್ರಿಯಾ ಕಾರ್ಯಪಡೆ ಹಾಗೂ ಭಯೋತ್ಪಾದಕರ ಆರ್ಥಿಕತೆಗೆ ತಡೆಯೊಡ್ಡುವ ಸಂಸ್ಥೆಯ 6 ಪ್ರಮುಖ ಅಂಶಗಳನ್ನು ಈಡೇರಿಸುವುದಕ್ಕೆ ಪಾಕ್ ವಿಫಲಗೊಂಡಿದೆ. 

ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಪರಿಶೀಲಿಸಿ ಫೆಬ್ರವರಿವರೆಗೂ ಗ್ರೇ ಪಟ್ಟಿಯಲ್ಲೇ ಪಾಕಿಸ್ತಾನವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. 

ಫತ್ಫ್ ನ ಗ್ರೇ ಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸೂಚಿಸಲಾಗಿತ್ತು. ಇದರಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್- ಇ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಮಸೂದ್ ಅಜರ್ ಮತ್ತು ಭೂಗತ ಡಾನ್ ದಾವೂದ್ ಇಬ್ರಾಹಿಂ ಸೇರಿದ್ದಾರೆ. 

SCROLL FOR NEXT