ವಿದೇಶ

ಇಲ್ಲದ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಣಯ ತೆಗೆದುಕೊಂಡ ಪಾಕಿಸ್ತಾನ!

Raghavendra Adiga

ಇಸ್ಲಾಮಾಬಾದ್: ಪ್ರವಾದಿ ಮಹಮ್ಮದ್ ಕುರಿತು  ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವೆಲ್ ಮಾಕ್ರೋನ್ ವ್ಯಂಗ್ಯವಾಡಿದ್ದಾರೆ ಎನ್ನುವ ಬಗ್ಗೆ ಅರಬ್ ರಾಷ್ಟ್ರಗಳ ಆಕ್ರೋಶದ ಹಿನ್ನೆಲೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಫ್ರಾನ್ಸ್‌ನಲ್ಲಿರುವ ತಮ್ಮ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಣಯ ಅಂಗೀಕರಿಸಿದೆ. ಆದರೆ ಇದರಲ್ಲೊಂದು ಟ್ವಿಸ್ಟ್ ಇದೆ. ಅದೆಂದರೆ ಫ್ರಾನ್ಸ್​ನಲ್ಲಿ ಪಾಕಿಸ್ತಾನದ ರಾಯಭಾರಿಯೇ ಇಲ್ಲ!

ಮೂರು ತಿಂಗಳ ಹಿಂದೆ ಫ್ರಾನ್ಸ್ ನಲ್ಲಿ ಪಾಕಿಸ್ತಾನ ರಾಯಭಾರಿಯಾಗಿದ್ದ ಮೊಯಿನ್-ಉಲ್-ಹಕ್ ಅವರನ್ನು ಚೀನಾಕ್ಕೆ ವರ್ಗಾಯಿಸಿದಾಗಿನಿಂದ ಪಾಕಿಸ್ತಾನ ಅಲ್ಲಿಗೆ ಹೊಸ ರಾಯಭಾರಿಯನ್ನು ನೇಮಿಸಿಲ್ಲ. ಆ ಹುದ್ದೆ ಖಾಲಿಯೇ ಉಳಿದಿದ್ದು ಇಲ್ಲದ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಣಯ ತೆಗೆದುಕೊಂಡ ಪಾಕಿಸ್ತಾನ ಈ ಮೂಲಕ ಇನ್ನೊಂದು ಯೆಡವಟ್ಟು ಮಾಡಿಕೊಂಡಿದೆ.

ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮಹಮ್ಮದ್ ಅವರ ಕುರಿತು ವ್ಯಂಗ್ಯಚಿತ್ರ ಪ್ರದರ್ಶಿಸಿದ್ದ ಇತಿಹಾಸ ಶಿಕ್ಷಕನ  ಶಿರಚ್ಚೇಧದ ಬಗ್ಗೆ ಮಾತನಾಡುತ್ತಾ ಮಾಕ್ರೋನ್ ಪ್ರವಾದಿ ಬಗೆಗಿನ ಶಿಕ್ಷಕನ ವಾದವನ್ನು ಸಮರ್ಥಿಸಿಕೊಂಡಿರುವುದು ಮುಸ್ಲಿಮರ ಕೋಪಕ್ಕೆ ಕಾರಣವಾಗಿದೆ.

ಫ್ರೆಂಚ್ ಸರಕುಗಳನ್ನು ಬಹಿಷ್ಕರಿಸುವಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಕರೆ ನೀಡಲಾಗುತ್ತಿದ್ದು ಇದಕ್ಕೆ ಬೆಂಬಲಿಸಿದ ಟರ್ಕಿ ಅಧ್ಯಕ್ಷ ಸೆಪ್ ತಯ್ಯಿಪ್ ಎರ್ಡೊಗನ್ ಮಾಕ್ರೋನ್ ವಿರುದ್ಧದ ಆರೋಪವನ್ನು ಮಾಡಿದ್ದಾರೆ. ಪ್ರವಾದಿವರ ಚಿತ್ರಣವನ್ನು ಅನೇಕ ಮುಸ್ಲಿಮರು ಆಕ್ರಮಣಕಾರಿ ಎಂದು ಪರಿಗಣಿಸುತ್ತಾರೆ, ಆದರೆ ಫ್ರಾನ್ಸ್‌ನಲ್ಲಿ ಇಂತಹ ವ್ಯಂಗ್ಯಚಿತ್ರಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕ್ರಾಂತಿಯ ಹಿಂದಿನ ಹೆಮ್ಮೆಯ ಜಾತ್ಯತೀತ ಸಂಪ್ರದಾಯದ ಸಮಾನಾರ್ಥಕವಾಗಿ ಬಳಕೆಯಲ್ಲಿದೆ.

ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ಅವರ ಹತ್ಯೆಯ ನಂತರ ಮಾಕ್ರೋನ್ ದೇಶದ ಮುಂದೆ "will not give up cartoons" ಎಂದು ಪ್ರತಿಜ್ಞೆ ಮಾಡಿದರು.

SCROLL FOR NEXT