ವಿದೇಶ

2014ರ ಸಂಸತ್ ದಾಳಿ ಪ್ರಕರಣ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖುಲಾಸೆ

Lingaraj Badiger

ಇಸ್ಲಾಮಾಬಾದ್: 2014ರಲ್ಲಿ ನಡೆದ ಪಾಕಿಸ್ತಾನ ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭಯೋತ್ಪಾದನಾ ನಿಗ್ರಹ ಕೋರ್ಟ್ ಗುರುವಾರ ಖುಲಾಸೆಗೊಳಿಸಿದೆ. ಆದರೆ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಸೇರಿದಂತೆ ಇತರ ಹಿರಿಯ ಸಚಿವರಿಗೆ ದೋಷಾರೋಪಣೆಗಾಗಿ ಸಮನ್ಸ್ ಜಾರಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜಾ ಜವಾದ್ ಅಬ್ಬಾಸ್ ಹಸನ್, ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಅಧ್ಯಕ್ಷೀಯ ವಿನಾಯಿತಿ ನೀಡಿದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಆಗಸ್ಟ್ 31, 2014 ರಂದು, ಈಗ ಆಡಳಿತ ನಡೆಸುತ್ತಿರುವ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಮತ್ತು ಪಾಕಿಸ್ತಾನ ಅವಾಮಿ ತೆಹ್ರೀಕ್(ಪಿಎಟಿ) ಪಕ್ಷದ ಕಾರ್ಯಕರ್ತರು ಸಂಸತ್ ಮತ್ತು ಪ್ರಧಾನಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಮೂವರು ಮೃತಪಟ್ಟಿದ್ದು ಮತ್ತು 26 ಮಂದಿ ಗಾಯಗೊಂಡಿದ್ದರು.

ಈ ಸಂಬಂಧ ಪೊಲೀಸರು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಮತ್ತು ಇತರ ನಾಯಕರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿ ಕೇಸ್ ದಾಖಲಿಸಿದ್ದರು.

ಡಾನ್ ಪತ್ರಿಕೆಯ ವರದಿಯ ಪ್ರಕಾರ, ಇನ್ನು ಮುಂದೆ ಪ್ರಕರಣವನ್ನು ಮುಂದುವರಿಸಲು ಆಸಕ್ತಿ ಹೊಂದಿಲ್ಲವಾದ್ದರಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಪಾಕ್ ಪ್ರಧಾನಿ ನ್ಯಾಯಾಲಯವನ್ನು ಒತ್ತಾಯಿಸಿದ ನಂತರ ಇಮ್ರಾನ್ ಖಾನ್ ಅವರನ್ನು ಖುಲಾಸೆಗೊಳಿಸಲಾಗಿದೆ.

SCROLL FOR NEXT