ವಿದೇಶ

ಈಜಿಪ್ಟ್‌ನಲ್ಲಿ ರೈಲು ಅಪಘಾತ: ಕನಿಷ್ಠ 11 ಜನರ ಸಾವು, 98 ಮಂದಿಗೆ ಗಾಯ

Srinivasamurthy VN

ಕೈರೋ: ಉತ್ತರ ಈಜಿಪ್ಟ್‌ನಲ್ಲಿ ರೈಲು ಹಳಿ ತಪ್ಪಿದ್ದು ಘಟನೆಯಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾಗಿ 98 ಮಂದಿ ಗಾಯಗೊಂಡಿದ್ದಾರೆ.

ಈ ಬಗ್ಗೆ ಉತ್ತರ ಈಜಿಪ್ಟ್‌ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿ, 98 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ.

ಕೈರೋ ಉತ್ತರಕ್ಕೆ ಕಲ್ಯುಬಿಯಾದಲ್ಲಿ ಸಂಭವಿಸಿದ ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ ಎಂದು ಅಲ್ ಅರೇಬಿಯಾ ಪ್ರಸಾರ ವರದಿ ಮಾಡಿದೆ, ಮನ್ಸೌರಾ ನಗರದಿಂದ ದೇಶದ ರಾಜಧಾನಿ ಕೈರೋಗೆ ಹೋಗುವಾಗ ರೈಲು ಹಳಿ ತಪ್ಪಿದೆ.

ರಾಜಧಾನಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ನೈಲ್ ಡೆಲ್ಟಾದ ಸಣ್ಣ ಪಟ್ಟಣವಾದ ಟೌಕ್ ನಲ್ಲಿ ರೈಲು ಅಪಘಾತ ಸಂಭವಿಸಿದೆ. ಕೈರೋದಿಂದ ಮನ್ಸೌರಾಕ್ಕೆ ಸಂಚರಿಸುತ್ತಿದ್ದ ರೈಲಿನ 4 ಬೋಗಿಗಳು ಹಳಿತಪ್ಪಿದ ಪರಿಣಾಮ ದುರಂತ ಸಂಭವಿಸಿದೆ. ಸ್ಥಳಕ್ಕೆ 50 ಕ್ಕೂ ಅಧಿಕ ಅಂಬುಲೆನ್ಸ್ ಗಳನ್ನು ತಕ್ಷಣಕ್ಕೆ  ರವಾನಿಸಲಾಗಿದ್ದು, ಗಾಯಾಳುಗಳನ್ನು ರಕ್ಷಿಸಲಾಗಿದೆ ಸೇನೆಯ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದುರಂತದ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ತಿಂಗಳ ಅಂತರದಲ್ಲಿ ಈಜಿಪ್ಟ್‌ನಲ್ಲಿ ಸಂಭವಿಸಿದ ಮೂರನೇ ರೈಲು ದುರಂತ ಇದಾಗಿದ್ದು, ಈ ಹಿಂದೆ ಸೋಹಾಗ್‌ನ ಈಜಿಪ್ಟ್ ಆಡಳಿತದ ತಹ್ತಾ ಜಿಲ್ಲೆಯಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕಳೆದ ತಿಂಗಳು 32 ಜನರು ಸಾವನ್ನಪ್ಪಿದ್ದರು ಮತ್ತು 165 ಮಂದಿ ಗಾಯಗೊಂಡಿದ್ದರು.

SCROLL FOR NEXT