ವಿದೇಶ

ಕೋವಿಡ್-19 ಸೋಂಕು ಉಲ್ಬಣ: ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ!

Srinivasamurthy VN

ಬೀಜಿಂಗ್: ಭಾರತದಲ್ಲಿ ಕೋವಿಡ್-19 2ನೇ ಅಲೆ ಅಬ್ಬರಿಸುತ್ತಿರುವಂತೆಯೇ ಇತ್ತ ಚೀನಾ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನವನ್ನು ರದ್ದು ಮಾಡಿದೆ.

ಚೀನಾದ ಸರ್ಕಾರಿ ಸಿಚುವಾನ್ ಏರ್ಲೈನ್ಸ್ 15 ದಿನಗಳ ಕಾಲ ಭಾರತಕ್ಕೆ ತನ್ನ ಎಲ್ಲ ಸರಕು ವಿಮಾನಗಳ ಪ್ರಯಾಣವನ್ನು ರದ್ದುಗೊಳಿಸಿದ್ದು, ಇದರಿಂದಾಗಿ ದೇಶಕ್ಕೆ ಬರಬೇಕಿದ್ದ ವೈದ್ಯಕೀಯ ಪರಿಕರಗಳ ರವಾನೆಗೆ ತೊಡಕುಂಟಾಗಿದೆ. ದೇಶಕ್ಕೆ ಅಗತ್ಯವಿರುವ ಆಮ್ಲಜನಕ ಸಾಂದ್ರಕಗಳು ಮತ್ತು ಇತರೆ ವೈದ್ಯಕೀಯ  ಉಪಕರಣಗಳನ್ನು ಖರೀದಿಸುವ ಭಾರತದ ಪ್ರಯತ್ನಕ್ಕೆ ದೊಡ್ಡ ಅಡ್ಡಿಯುಂಟಾಗಿದೆ.

ಸಿಚುವಾನ್ ಏರ್ಲೈನ್ಸ್‌ನ ಭಾಗವಾಗಿರುವ ಸಿಚುವಾನ್ ಚುವಾನ್ ಹಾಂಗ್ ಲಾಜಿಸ್ಟಿಕ್ಸ್ ಕಂಪನಿಯು ತನ್ನ ಮಾರಾಟದ ಏಜೆಂಟರಿಗೆ ಸೋಮವಾರ ಈ ಕುರಿತು ಪತ್ರ ಬರೆದಿದ್ದು, 'ಕ್ಸಿಯಾನ್, ದೆಹಲಿ ಸೇರಿದಂತೆ ಆರು ಮಾರ್ಗಗಳಲ್ಲಿ ತನ್ನ ಸರಕುವಿಮಾನಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿ  ಸಾಂಕ್ರಾಮಿಕ ರೋಗದ ಸ್ಥಿತಿ ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಮುಂದಿನ 15 ದಿನಗಳ ಕಾಲ ವಿಮಾನಯಾನವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಭಾರತಕ್ಕೆ ಸರಕು ಸಾಗಣೆ ವಿಮಾನಗಳನ್ನು ರದ್ದುಪಡಿಸಿರುವುದು ನಮ್ಮ ಸಂಸ್ಥೆಗೆ ದೊಡ್ಡ ನಷ್ಟವುಂಟಾಗಿದೆ. 15 ದಿನಗಳ ನಂತರ ನಿರ್ಧಾರ ಬದಲಾವಣೆ  ಮಾಡುವ ಕುರಿತು ಚಿಂತನೆ ನಡೆಸಲಾಗುವುದು' ಎಂದು ತಿಳಿಸಿದೆ.

ಭಾರತದ ನೆರವಿಗೆ ಸಿದ್ಧ: ಚೀನಾ ಪುನರುಚ್ಚಾರ
ಇತ್ತ ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಬೆನ್ನಲ್ಲೇ ಭಾರತಕ್ಕೆ ನೆರವು ನೀಡಲು ಚೀನಾ ಸಿದ್ಧ ಎಂದು ಚೀನಾ ಸರ್ಕಾರ ಪುನರುಚ್ಚರಿಸಿದೆ. ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು, 'ಭಾರತದಲ್ಲಿನ  ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಪರಿಸ್ಥಿತಿಗೆ ಚೀನಾವು ತನ್ನ ಪ್ರಾಮಾಣಿಕ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತದೆ. ಭಾರತಕ್ಕೆ ಎಲ್ಲ ರೀತಿಯ ಅಗತ್ಯ ನೆರವು ನೀಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ. 
 

SCROLL FOR NEXT