ವಿದೇಶ

ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿರುವ ಭಾರತಕ್ಕೆ ಫ್ರಾನ್ಸ್ ನಿಂದ ವೆಂಟಿಲೇಟರ್ ಸೇರಿದಂತೆ ಹಲವು ವಸ್ತುಗಳ ನೆರವು ಘೋಷಣೆ

Srinivasamurthy VN

ಪ್ಯಾರಿಸ್‌: ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತಕ್ಕೆ ಫ್ರಾನ್ಸ್ ಸರ್ಕಾರ ನೆರವಿನ ಹಸ್ತ ಚಾಚಿದ್ದು, ಅತ್ಯಾಧುನಿಕ ವೆಂಟಿಲೇಟರ್ ಸೇರಿದಂತೆ ಹಲವು ವಸ್ತುಗಳನ್ನು ರವಾನೆ ಮಾಡುವುದಾಗಿ ಘೋಷಣೆ ಮಾಡಿದೆ.

ಕೋವಿಡ್-19 2ನೇ ಅಲೆ ನಿಯಂತ್ರಿಸಲು ಸಾಕಷ್ಟು ಹರಸಾಹಸ ಪಡುತ್ತಿರುವ ಭಾರತಕ್ಕೆ ವಿಶ್ವಾದ್ಯಂತ ಹಲವು ದೇಶಗಳು ನೆರವಿನ ಹಸ್ತ ಕೈ ಚಾಚುತ್ತಿದ್ದು, ಅಮೆರಿಕ, ಬ್ರಿಟನ್ ದೇಶಗಳು ನೆರವು ನೀಡುವ ಭರವಸೆ ನೀಡಿವೆ. ಇದೀಗ ಈ ಪಟ್ಟಿಗೆ ಫ್ರಾನ್ಸ್ ಸರ್ಕಾರ ಸೇರಿದ್ದು, ಭಾರತಕ್ಕೆ ವೈದ್ಯಕೀಯ ನೆರವು  ನೀಡುವುದಾಗಿ ಮಂಗಳವಾರ ತಿಳಿಸಿದೆ.

ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರಾನ್ ಭಾರತಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡುವುದಾಗಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದು, ಈ ಸಾಂಕ್ರಾಮಿಕ ಬಿಕ್ಕಟ್ಟನ್ನು ನಿವಾರಿಸಲು ಭಾರತಕ್ಕೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಫ್ರಾನ್ಸ್ ಸರ್ಕಾರ ಭಾರತಕ್ಕೆ, 8 ಆಮ್ಲಜನಕ ಉತ್ಪಾದನೆ ಮಾಡುವ ಪರಿಕರಗಳು, ಆಕ್ಸಿಜನ್‌ ಹಾಗೂ ದ್ರವೀಕೃತ ಆಮ್ಲಜನಕ ಇರುವ ಕಂಟೇನರ್‌ಗಳು, 200 ಎಲೆಕ್ಟ್ರಿಕ್‌ ಸಿರೆಂಜ್‌ ಪಂಪ್‌, ವೆಂಟಿಲೇಟರ್‌, ಕೃತಕ ಉಸಿರಾಟದ ಪರಿಕರಗಳು ಸೇರಿದಂತೆ ಲಸಿಕೆ ಹಾಗೂ ಔಷಧಿ ಸಾಮಗ್ರಿಗಳನ್ನು  ನೀಡಲಿದೆ ಎಂದು ತಿಳಿದುಬಂದಿದೆ.

ವೈದ್ಯಕೀಯ ಸಾಮಗ್ರಿಗಳನ್ನು ವಿಮಾನ ಹಾಗೂ ನೌಕಯಾನದ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗುವುದು ಎಂದು ಫ್ರಾನ್ಸ್‌ನ ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈಗಾಗಲೇ ಭಾರತಕ್ಕೆ ಅಮೆರಿಕ ಯುಎಇ, ಡೆನ್ಮಾರ್ಕ್‌, ಸಿಂಗಪುರ್‌, ಇಸ್ರೆಲ್‌ ಸೇರಿದಂತೆ ಹಲವು ಯುರೋಪ್‌ ದೇಶಗಳು  ವೈದ್ಯಕೀಯ ನೆರವನ್ನು ಘೋಷಿಸಿವೆ.

SCROLL FOR NEXT