ವಿದೇಶ

ಲಡಾಕ್‌ನಲ್ಲಿ ಯಥಾಸ್ಥಿತಿ ಬದಲಾಯಿಸಲು ಚೀನಾ ಯತ್ನಿಸಿದೆ ಎಂಬ ಜನರಲ್ ರಾವತ್ ಹೇಳಿಕೆ ಸತ್ಯಕ್ಕೆ ದೂರವಾದದ್ದು: ಚೀನಾ ಸೇನೆ

Lingaraj Badiger

ಬೀಜಿಂಗ್: ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ) ಪೂರ್ವ ಲಡಾಕ್‌ನಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸಿದೆ ಎಂಬ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆ "ಸಂಪೂರ್ಣ ಸತ್ಯಕ್ಕೆ ದೂರವಾದದ್ದು" ಎಂದು ಚೀನಾ ಸೇನೆ ಗುರುವಾರ ಹೇಳಿದೆ.

ಉತ್ತರದ ಗಡಿಗಳಲ್ಲಿ ಯಥಾಸ್ಥಿತಿ ಬದಲಾವಣೆಯನ್ನು ತಡೆಯುವಲ್ಲಿ ಭಾರತ ದೃಢವಾಗಿ ನಿಂತಿದೆ ಮತ್ತು ಅದು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಜನರಲ್ ರಾವತ್ ಹೇಳಿದ ಬೆನ್ನಲ್ಲೇ ಚೀನಾದ ರಾಷ್ಟ್ರೀಯ ರಕ್ಷಣಾ ಸಚಿವಾಲಯದ ವಕ್ತಾರ ಈ ಸ್ಪಷ್ಟನೆ ನೀಡಿದ್ದಾರೆ.

ಕಳೆದ ಏಪ್ರಿಲ್ 15ರಂದು “ರೈಸಿನಾ ಡೈಲಾಗ್‌’ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾವತ್‌, ತಾಂತ್ರಿಕವಾಗಿ ಅತ್ಯಂತ ಶಕ್ತಿಶಾಲಿಯಾಗಿರುವ ಸೇನೆಯನ್ನು ಹೊಂದಿದೆ ಎಂಬ ಭಾವನೆಯಿಂದ ಚೀನಾ ಕೆಲವು ದೇಶಗಳ ಮೇಲೆ ಒತ್ತಡ ಹೇರಿ, ಪೂರ್ವ ಲಡಾಖ್‌ ಭಾಗದಲ್ಲಿ ಗಡಿಯಲ್ಲಿ ಬದಲು ಮಾಡಬಹುದು ಎಂಬ ಇರಾದೆ ಹೊಂದಿತ್ತು. ಭಾರತ ದೃಢ ನಿಲುವು ಹೊಂದಿದ್ದರಿಂದ ಆ ದೇಶದ ಚಿತಾವಣೆ ತಡೆಯಲಾಯಿತು ಎಂದು ಹೇಳಿದ್ದರು.

ಜನರಲ್ ರಾವತ್ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಹಿರಿಯ ಕರ್ನಲ್ ವು ಕಿಯಾನ್, ಭಾರತದ ಕಡೆಯ ಸಂಬಂಧಿತ ಹೇಳಿಕೆಗಳು ಸತ್ಯಗಳಿಗೆ ಸಂಪೂರ್ಣ ದೂರವಾದದ್ದು ಎಂದು ಹೇಳಿರುವುದಾಗಿ ಚೀನಾದ ಮಿಲಿಟರಿಯ ಅಧಿಕೃತ ವೆಬ್‌ಸೈಟ್ ವರದಿ ಮಾಡಿದೆ.

SCROLL FOR NEXT