ವಿದೇಶ

ಒಲಂಪಿಕ್ಸ್ ಕ್ರೀಡಾಕೂಟ: ಕ್ರೀಡಾಗ್ರಾಮದಲ್ಲಿ ಅಥ್ಲೀಟ್ ಗಳಿಂದ ಸಾಮೂಹಿಕ ಮದ್ಯ ಪಾರ್ಟಿ, ತನಿಖೆಗೆ ಆದೇಶ

Srinivasamurthy VN

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಕೆಲವು ಅಥ್ಲೀಟ್‌ಗಳು ಸಾಮೂಹಿಕ ಮದ್ಯ ಪಾರ್ಟಿ ಮಾಡಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವಂತೆಯೇ ಇತ್ತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಟೋಕಿಯೊ ಒಲಿಂಪಿಕ್ಸ್ ಆಯೋಜಕರು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಶುಕ್ರವಾರ ರಾತ್ರಿ ಕ್ರೀಡಾಪಟುಗಳು ಕ್ರೀಡಾಗ್ರಾಮದ ಉದ್ಯಾನವನದಲ್ಲಿ ಮದ್ಯಪಾನ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿರುವುದಾಗಿ ಟೋಕಿಯೊ ಒಲಿಂಪಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ತೊಷಿರೊ ಮುಟೊ ಹೇಳಿದ್ದಾರೆ. ಅಲ್ಲದೆ, 'ನಾವು ಈ ಘಟನೆಯ ಬಗ್ಗೆ  ಪರಿಶೀಲಿಸುತ್ತಿದ್ದೇವೆ. ತನಿಖೆಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ. ಪೊಲೀಸರು ಕೂಡಾ ಸ್ಥಳದಲ್ಲಿದ್ದಾರೆ. ಅವರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ' ಎಂದು ಹೇಳಿದ್ದಾರೆ.

ಹಾಗಿದ್ದರೂ ಅಥ್ಲೀಟ್‌ಗಳ ರಾಷ್ಟ್ರೀಯತೆ ಹಾಗೂ ಹೆಸರಿನ ವಿವರ ನೀಡಲು ಮುಟೊ ನಿರಾಕರಿಸಿದ್ದು, ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಾಗಿ ಕ್ರೀಡಾಪಟುಗಳು ಬಯಸಿದ್ದಲ್ಲಿ ಕೊಠಡಿಯಲ್ಲಿ ಏಕಾಂಗಿಯಾಗಿ ಮದ್ಯಪಾನ ಮಾಡಲು ಅನುಮತಿ ನೀಡಲಾಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಜೀವ ಸುರಕ್ಷಾ ವಲಯದಲ್ಲಿ (ಬಯೋಬಬಲ್) ಟೋಕಿಯೊ ಒಲಿಂಪಿಕ್ಸ್ ಆಯೋಜಿಸಲಾಗುತ್ತಿದ್ದು, ಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ಕ್ರೀಡಾಪಟುಗಳು ನಿಯಮಿತ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ.

SCROLL FOR NEXT