ವಿದೇಶ

ಈ ಕೇಕ್ ಪೀಸ್ ಬೆಲೆ 1.90 ಲಕ್ಷ ರೂ., ಆದರೆ ಸವಿಯುವ ಭಾಗ್ಯ ಯಾರಿಗೂ ಇಲ್ಲ!

Harshavardhan M

ಲಂಡನ್: ಒಂದು ಕೇಕ್ ಪೀಸ್ ಬೆಲೆ ಎಷ್ಟಿರಬಹುದಪ್ಪಾ? 15 ರೂ.? 30 ರೂ.? 50 ರೂ.? ಎಂಥಾ ಪಂಚ ತಾರಾ ಹೋಟೆಲಿನಲ್ಲೇ ಆದರೂ ಒಂದು ಕೇಕ್ ತುಂಡಿನ ಬೆಲೆ ಅಬ್ಬಬ್ಬಾ ಎಂದರೂ ಸಾವಿರ ರೂ. ಇರಬಹುದೇನೋ? ಆದರೆ ಇಲ್ಲೊಂದು ಕೇಕ್ ತುಂಡು 1.90 ಲಕ್ಷ ರೂ.ಗಳಿಗೆ ಬಿಕರಿಯಾಗಿದೆ. 

ಆದರೆ ಇದನ್ನು ಸವಿಯುವ ಭಾಗ್ಯ ಯಾರಿಗೂ ಇಲ್ಲ. ಹಾಗೆಂದು ಇದು ತಿನ್ನಲು ಅನರ್ಹವಾದ ಕೇಕ್ ಎಂದು ತಿಳಿಯಬೇಡಿ. ಈ ಕೇಕ್ ತುಂಡನ್ನು ಹರಾಜಿಗಿಡುವ ಮೊದಲೇ ಇದರ ಪಕ್ಕ ಎಚ್ಚರಿಕೆ ಇದನ್ನು ತಿನ್ನುವ ಹಾಗಿಲ್ಲ ಎಂಬ ಪುಟ್ಟ ಸೂಚನಾ ಫಲಕವನ್ನು ಹಾಕಲಾಗಿತ್ತು. ಇಷ್ಟಕ್ಕೂ ಒಂದು ಪೀಸ್ ಕೇಕಿಗೆ ಇಷ್ಟೊಂದು ಬೆಲೆ ನಿಗದಿಯಾಗಿದ್ದು ಹೇಗೆ ಎಂಬುದಕ್ಕೆ ಉತ್ತರ ಇಲ್ಲಿದೆ. 

ಇದು 1981ರಲ್ಲಿ ಬ್ರಿಟನ್ ರಾಜಕುಮಾರಿ ಡಯಾನಾ ಮತ್ತು ರಾಜಕುಮಾರ ಚಾರ್ಲ್ಸ್ ವಿವಾಹ ಮಹೋತ್ಸವದ ಸಂದರ್ಭ ತಯಾರಾಗಿದ್ದ ಮದುವೆ ಕೇಕ್. ನಮ್ಮಲ್ಲಿ ಮದುವೆ ಸಮಾರಂಭದ ಭೋಜನಕೂಟದಲ್ಲಿ ಏನಾದರೋದು ಬಗೆಯ ಸಿಹಿತಿಂಡಿಯನ್ನು ಮಾಡುವುದು ವಾಡಿಕೆ. ಅಂತೆಯೇ ಪಾಶ್ಚಿಮಾತ್ಯ ದೇಶಗಳಲ್ಲಿ ಅದರಲ್ಲೂ ಕ್ರೈಸ್ತ ಧರ್ಮೀಯರ ಮದುವೆಗಳಲ್ಲಿ ಕೇಕ್ ತುಂಬಾ ವಿಶೇಷ ಸ್ಥಾನವಿದೆ. 

ಅದರಲ್ಲೂ ರಾಜಕುಮಾರಿ ಡಯಾನ ಮದುವೆಯಲ್ಲಿ ಚಪ್ಪರಿಸಿದ ಕೇಕ್ ಎಂದರೆ ಕೇಳಬೇಕೆ. ಮದುವೆಯಾದರೆ ರಾಜ ರಾಣಿಯರಂತೆ ಅದ್ಧೂರಿಯಾಗಿ ಆಗಬೇಕು ಎನ್ನುವುದು ನಮ್ಮೆಲ್ಲಾ ಮದುವೆ ಆಕಾಂಕ್ಷಿಗಳ ಹೆಬ್ಬಯಕೆ. ಹೀಗಾಗಿ ರಾಜಕುಮಾರಿ ಡಯಾನಾಳ ಮದುವೆ ಕೇಕಿಗೆ ಇಷ್ಟೊಂದು ಬೇಡಿಕೆ. ಅಲ್ಲದೆ ಅಪಘಾತದಲ್ಲಿ ಮೃತಪಟ್ಟ ಡಯಾನಾಳ ಸವಿನೆನಪು ಕೂಡಾ ಇದರಲ್ಲಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

SCROLL FOR NEXT