ವಿದೇಶ

ತಾಲಿಬಾನ್ ತೆಕ್ಕೆಯಲ್ಲಿ ಅಫ್ಘಾನಿಸ್ತಾನ: ವಿಮಾನ ಏರಲು ಮುಗಿಬಿದ್ದ ಜನ, ಗಾಳಿಯಲ್ಲಿ ಗುಂಡು ಹಾರಿಸಿದ ಅಮೆರಿಕಾ ಪಡೆ

Manjula VN

ಕಾಬುಲ್: ಅಫ್ಗಾನಿಸ್ತಾನವನ್ನು ತಾಲಿಬಾನ್ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡ ಬೆನ್ನಲ್ಲೇ ಆತಂಕಗೊಂಡಿರುವ ಅಲ್ಲಿನ ಜನರು ರಾಷ್ಟ್ರ ತೊರೆಯಲು ತುದಿಗಾಲಲ್ಲಿ ನಿಂತಿದ್ದು, ಇದರಂತೆ ಸಾವಿರಾರು ಸಂಖ್ಯೆಯ ಜನರು ಕಾಬುಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. 

ಈ ನಡುವೆ ವಿಮಾನ ನಿಲ್ದಾಣಕ್ಕೆ ಬಂದಿರುವ ಅಮೆರಿಕಾದ ಸೇನಾಪಡೆಯ ವಿಮಾನವು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಪರಿಣಾಮ ಸ್ಥಳದಲ್ಲಿ ನೆರೆದಿದ್ದ ಜನರು ಆತಂಕಕ್ಕೊಳಗಾಗಿದ್ದಾರೆ. 

ನನಗಿಲ್ಲಿ ಬಹಳ ಭಯವಾಗುತ್ತಿದೆ. ಗಾಳಿಯಲ್ಲಿ ಗುಂಡುಗಳನ್ನು ಹಾರಿಸಲಾಗುತ್ತಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. 

ಈ ನಡುವೆ ಅಮೆರಿಕಾದ ಅಧಿಕಾರಿಗಳು ಮಾಹಿತಿ ನೀಡಿ, ನಮ್ಮ ರಾಷ್ಟ್ರದ ಅಧಿಕಾರಿಗಳು ವಿದೇಶಿ ಸಿಬ್ಬಂದಿ ಹಾಗೂ ಸ್ಥಳೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಲು ಸೇನಾ ವಿಮಾನವಗಳನ್ನು ಕಾಬುಲ್'ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. 

ಆದರೆ, ಸ್ಥಳದಲ್ಲಿ ಅನಿಯಂತ್ರಿತ ಸಂಖ್ಯೆಯ ಜನರು ಸೇರಿದ್ದಾರೆ. ಜನದಟ್ಟಣೆ ನಿಯಂತ್ರಿಸುವ ಸಲುವಾಗಿ ಗುಂಡಿ ಹಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ ದೇಶದಿಂದ ಪಲಾಯನ ಮಾಡಿದ ಬಳಿಕ 20 ವರ್ಷಗಳ ಯುದ್ಧದಲ್ಲಿ ತಾಲಿಬಾನ್‌ ಗೆದ್ದಂತಾಗಿದೆ. 

ಭಾನುವಾರ ರಾತ್ರಿ ತಾಲಿಬಾನ್‌ ಉಗ್ರರು ಅಧ್ಯಕ್ಷೀಯ ಭವನವನ್ನು ವಶಪಡಿಸಿಕೊಂಡ ಬಳಿಕ ಕಾಬೂಲ್‌ನಲ್ಲಿ ಆತಂಕ ಮನೆ ಮಾಡಿದ್ದು, ಅನೇಕರು ವಿವಿಧ ದೇಶಗಳಿಗೆ ಹೋಗಲು ಮುಂದಾಗಿದ್ದಾರೆ. ಕೇವಲ 10 ದಿನಗಳಲ್ಲಿ ತಾಲಿಬಾನಿ ಉಗ್ರರು ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು, ದೇಶದಿಂದ ಪಲಾಯನ ಮಾಡಿದ ಬಳಿಕ ಹೇಳಿಕೆ ನೀಡಿರುವ ಅಶ್ರಫ್‌ ಘನಿ, ತಾಲಿಬಾನಿಗಳು ತಮ್ಮ ಖಡ್ಗ ಮತ್ತು ಬಂದೂಕುಗಳ ತೀರ್ಪಿನಿಂದ ಗೆದ್ದಿದ್ದಾರೆ. ಈಗ ತಮ್ಮ ದೇಶವಾಸಿಗಳ ಗೌರವ, ಆಸ್ತಿ ಮತ್ತು ಸ್ವ-ಸಂರಕ್ಷಣೆಯ ಹೊಣೆ ಹೊತ್ತಿದ್ದಾರೆ ಎಂದು ಹೇಳಿದ್ದು, ಈ ನಡುವೆ ತಾಲಿಬಾನ್ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಕೂಡ ವಿಜಯವನ್ನು ಘೋಷಿಸಿದ್ದಾರೆ.

SCROLL FOR NEXT