ವಿದೇಶ

ಅಫ್ಘಾನಿಸ್ತಾನದಲ್ಲಿ ನಮಗೆ ಅನಿರೀಕ್ಷಿತ ಕ್ಷಿಪ್ರ ಗೆಲುವು: ತಾಲಿಬಾನ್ ಮುಖಂಡ

Nagaraja AB

ಕಾಬೂಲ್: ಕಳೆದೊಂದು ವಾರದಲ್ಲಿ ಅಫ್ಘಾನಿಸ್ತಾನದ ಪ್ರಮುಖ ನಗರಗಳು ನಮ್ಮ ಹಿಡಿತಕ್ಕೆ ಬಂದು ತಾಲಿಬಾನ್ ಗೆಲುವು ಅನಿರೀಕ್ಷಿತ ಕ್ಷಿಪ್ರವಾಗಿತ್ತು. ಇದನ್ನು ವಿಶ್ವದಲ್ಲಿ ಯಾವುದಕ್ಕೂ ಹೋಲಿಕೆ ಮಾಡಲಾಗದು ಎಂದು ಉಗ್ರ ಗುಂಪಿನ ಉಪ ಮುಖಂಡ ಮುಲ್ಲಾ ಬರದಾರ್ ಹೇಳಿದ್ದಾನೆ.   

ಜನರ ನಿರೀಕ್ಷೆಗಳನ್ನು ಪೂರೈಸುವ ಮೂಲಕ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಅವರಿಗೆ ಸೇವೆ ಸಲ್ಲಿಸುವ ನಿಜವಾದ ಪರೀಕ್ಷೆ ಈಗ ಆರಂಭವಾಗಲಿದೆ ಎಂದು ಕಿರು ವಿಡಿಯೋ ಸಂದೇಶದಲ್ಲಿ ಆತ ಹೇಳಿರುವುದಾಗಿ ಅಲ್ ಜಜೀರಾ ವರದಿ ಮಾಡಿದೆ.

ತಾಲಿಬಾನ್ ಉಗ್ರರು ಕಾಬೂಲ್ ನ್ನು ವಶಕ್ಕೆ ಪಡೆಯುತ್ತಿದ್ದಂತೆ ಬರದಾರ್ ಈ ರೀತಿಯ ಹೇಳಿಕೆ ನೀಡಿದ್ದಾನೆ. ಅಫ್ಘಾನ್ ಪಡೆಗಳು ಶರಣಾಗತಿ ಹಾಗೂ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಹಲವಾರು ಸರ್ಕಾರಿ ಅಧಿಕಾರಿಗಳು ದೇಶವನ್ನು ತೊರೆದ ಕಾರಣ ತಾಲಿಬಾನ್ ಅತ್ಯಲ್ಪ ಪ್ರತಿರೋಧವನ್ನು ಎದುರಿಸಿದರು.  

ಈ ಮಧ್ಯೆ ಕಾಬೂಲ್ ನ ಟೆಲಿವಿಷನ್ ಸ್ಟೇಷನ್ ವಶಕ್ಕೆ ಪಡೆದಿರುವ ತಾಲಿಬಾನ್, ನಾಗರಿಕರು ಶಾಂತಿಯುತವಾಗಿ ಇರುವಂತೆ ಹೇಳಿರುವುದಾಗಿ ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಯುದ್ಧ ಮುಗಿದಿದೆ. ನಾವು ಎಲ್ಲಾ ಅಫ್ಘಾನ್ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲು ಸಿದ್ಧರಿದ್ದೇವೆ ಮತ್ತು ಅವರಿಗೆ ಅಗತ್ಯ ರಕ್ಷಣೆ ನೀಡುತ್ತೇವೆ ಎಂದು ತಾಲಿಬಾನ್ ರಾಜಕೀಯ ಕಚೇರಿ ವಕ್ತಾರ ಮೊಹಮ್ಮದ್ ನಯೀಮ್ ಟಿವಿಯಲ್ಲಿ ಹೇಳಿದ್ದಾನೆ.

ಅಫ್ಘಾನಿಸ್ತಾನದ ರಾಜಧಾನಿಯ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸುತ್ತಿದ್ದಂತೆ ಹಲವಾರು ದೇಶಗಳು ರಾಜತಾಂತ್ರಿಕ ಸಿಬ್ಬಂದಿಯನ್ನು ದೇಶದಿಂದ ಸ್ಥಳಾಂತರಿಸಿವೆ, ಅಫ್ಘಾನಿಸ್ತಾನ ತೊರೆಯುವ ಜನರ ಪ್ರಯತ್ನದಿಂದ ವಿಮಾನ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿದೆ.  ಕಾಬೂಲಿನ ಎಲ್ಲಾ ರಾಯಭಾರ ಕಚೇರಿಗಳು ಮತ್ತು ವಿದೇಶಿ ರಾಜತಾಂತ್ರಿಕ ಕಾರ್ಯಗಳು  ಸುರಕ್ಷಿತವಾಗಿದ್ದು, ಪ್ರತಿಯೊಬ್ಬರು ಸುರಕ್ಷಿತವಾಗಿ ಇರುವ ವಿಶ್ವಾಸವನ್ನು ನಯೀಮ್ ವ್ಯಕ್ತಪಡಿಸಿದ್ದಾನೆ.

SCROLL FOR NEXT