ವಿದೇಶ

ಅಫ್ಘಾನ್ ನಲ್ಲಿ ಹೃದಯವಿದ್ರಾವಕ ಘಟನೆ: ಶಿಶುಗಳನ್ನು ಏರ್ ಪೋರ್ಟ್ ನತ್ತ ಎಸೆಯುತ್ತಿರುವ ಹತಾಶ ಮಹಿಳೆಯರು!

Srinivas Rao BV

ಕಾಬೂಲ್: ಅಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ಆ ದೇಶದ ಜನತೆ ಭಯದ ನಡುವೆ ಜೀವನ ನಡೆಸುತ್ತಿದ್ದಾರೆ.

ತಾಲೀಬಾನ್ ಆಡಳಿತಕ್ಕೆ ಹೆದರಿ ಹಲವು ಮಂದಿ ದೇಶ ತೊರೆಯುತ್ತಿದ್ದರೆ, ಉಗ್ರರಿಂದ ತಪ್ಪಿಸಿಕೊಳ್ಳುವ ಹಲವರ ಕನಸು ಕಾಬೂಲ್ ನ ವಿಮಾನ ನಿಲ್ದಾಣದಲ್ಲಿಯೇ ಶಾಶ್ವತವಾಗಿ ಕಮರಿಹೋಗುತ್ತಿದೆ. ಈ ನಡುವೆ ಮಹಿಳೆಯರು ತಮ್ಮ ಶಿಶುಗಳನ್ನು ರಕ್ಷಿಸಲು ಅನ್ಯ ಮಾರ್ಗವಿಲ್ಲದೇ ವಿಮಾನ ನಿಲ್ದಾಣಗಳತ್ತ ಎಸೆಯುತ್ತಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಸ್ಕೈ ನ್ಯೂಸ್ ವರದಿಯ ಪ್ರಕಾರ, ತಾಲೀಬಾನ್ ಭೀತಿಯಿಂದ ಹತಾಶಗೊಂಡಿರುವ ಮಹಿಳೆಯರು ಕಾಬೂಲ್ ವಿಮಾನ ನಿಲ್ದಾಣದ ಗೋಡೆಗೆ ಅಳವಡಿಸಲಾಗಿರುವ ರೇಜರ್ ವೈರ್ ನ ಆಚೆ ಬದಿಗೆ ತಮ್ಮ ಶಿಶುಗಳನ್ನು ಎಸೆಯುತ್ತಿರುವ ದೃಶ್ಯಗಳು ಕಂಡುಬಂದಿದೆ.

ಸ್ಕೈ ನ್ಯೂಸ್ ನ ವರದಿಗಾರ ಸ್ಟ್ರೌಟ್ ರಾಮ್ಸೆ ಅವರಿಗೆ ಹಿರಿಯ ಬ್ರಿಟೀಷ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕಾಬೂಲ್ ನಿಂದ ತೆರಳಲು ಯತ್ನಿಸುತ್ತಿದ್ದವರಲ್ಲಿ ಹತಾಶ ಕೂಗು ಕೇಳಿಬರುತ್ತಿತ್ತು. ಮಹಿಳೆಯರು ಶಿಶುಗಳನ್ನು ವಿಮಾನ ನಿಲ್ದಾಣದ ರೇಜರ್ ತಂತಿಯಾಚೆಗೆ ಎಸೆದು ಮಕ್ಕಳನ್ನು ಕರೆದೊಯ್ಯುವಂತೆ ಬ್ರಿಟೀಶ್ ಯೋಧರಲ್ಲಿ ಕೇಳುತ್ತಿದ್ದರು ಎಂದು ಹೇಳಿದ್ದಾರೆ.

"ನಾನು ನನ್ನ ಜನರ ಬಗ್ಗೆ ಆತಂಕಿತನಾಗಿದ್ದೇನೆ, ಅವರಲ್ಲಿ ಹಲವರಿಗೆ ಸಮಾಧಾನ ಹೇಳುತ್ತಿದ್ದೇನೆ, ಮಹಿಳೆಯರು ಶಿಶುಗಳನ್ನು ರಕ್ಷಿಸುವುದಕ್ಕಾಗಿ ಎಸೆಯುತ್ತಿದ್ದ ಘಟನೆ ನೆನೆದು ಕಳೆದ ರಾತ್ರಿ ಎಲ್ಲರೂ ಕಣ್ಣೀರಿಟ್ಟಿದ್ದರು" ಎಂದು ಬ್ರಿಟನ್ ಅಧಿಕಾರಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ಕುಟುಂಬಗಳು ತಾಲಿಬಾನಿಗಳ ಕಿರುಕುಳ, ದಬ್ಬಾಳಿಕೆಗೆ ಭಯಪಟ್ಟು ಅಪಾಯದಲ್ಲೇ ಬದುಕುತ್ತಿದ್ದಾರೆ. ಅಫ್ಘಾನಿಸ್ತಾನದಿಂದ ಹೊರ ನಡೆಯಲು ಬ್ರಿಟನ್ ಯೋಧರು ತಮ್ಮ ಸರದಿಗಾಗಿ ಕಾಬೂಲ್ ನ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ.

SCROLL FOR NEXT