ವಿದೇಶ

ದಾಖಲೆ ಸಂಖ್ಯೆಯಲ್ಲಿ ಪ್ರಯಾಣ: ಅಮೆರಿಕ ಸೇನಾ ವಿಮಾನದಲ್ಲಿ ತುಂಬಿದ್ದು 640 ಮಂದಿಯಲ್ಲ.. 823 ಮಂದಿ!

Srinivas Rao BV

ವಾಷಿಂಗ್ಟನ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ ಕಳೆದ ಭಾನುವಾರ ಹೊರಟಿದ್ದ ವಿಮಾನದಲ್ಲಿ ಅಂದಾಜಿಸಿದಕ್ಕಿಂತಲೂ  ಹೆಚ್ಚಿನ  ಪ್ರಯಾಣಿಕರನ್ನು  ಹೊತ್ತೊಯ್ಯಲಾಗಿದೆ  ಎಂದು ಅಮೆರಿಕ ವಾಯುಪಡೆ   ಅಧಿಕಾರಿಗಳು ಹೇಳಿದ್ದಾರೆ. 

ಸಿ -17 ವಿಮಾನದಲ್ಲಿ ಕಿಕ್ಕಿರಿದು ಕುಳಿತಿದ್ದ ಪ್ರಯಾಣಿಕರ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. 

ಆ ವಿಮಾನದಲ್ಲಿ ಅಂದಾಜು 640 ಪ್ರಯಾಣಿಕರಿದ್ದರು ಎಂದು ಆಗ  ಅಂದಾಜಿಸಲಾಗಿತ್ತು. ಆದರೆ, ವಾಸ್ತವವಾಗಿ, 183 ಮಕ್ಕಳು ಸೇರಿದಂತೆ ಒಟ್ಟು 823 ಮಂದಿ ಅಂದು ವಿಮಾನದಲ್ಲಿದ್ದರು ಎಂದು ಏರ್ ಮೊಬಿಲಿಟಿ ಕಮಾಂಡ್ ಹೇಳಿಕೆಯಲ್ಲಿ ತಿಳಿಸಿದೆ.

ಮಕ್ಕಳೆಲ್ಲ ದೊಡ್ಡವರ ಹೆಗಲ ಮೇಲೆ, ತೊಡೆಯಮೇಲೆ, ಹಿಂಬದಿಯಲ್ಲಿ ಕುಳಿತಿದ್ದರು, ಅವರನ್ನು ಈವರೆಗೆ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಿದೆ. ಸಿ -17 ವಿಮಾನದಲ್ಲಿ ಇಷ್ಟು ಮಂದಿ ಪ್ರಯಾಣಿಕರು ಪ್ರಯಾಣಿಸಿರುವುದು  ಹೊಸ ದಾಖಲೆಯಾಗಿದೆ ಎಂದು ಹೇಳಿದೆ.

ಕಳೆದ ಭಾನುವಾರ ತಾಲಿಬಾನಿಗಳು ಕಾಬೂಲ್ ನಗರ ಪ್ರವೇಶಿದ  ನಂತರ ಭೀತಿಗೊಳಗಾದ ವಿದೇಶಿಗರು ಹಾಗೂ ಸ್ಥಳೀಯರು  ಅಮೆರಿಕಾ ವಾಯುಪಡೆ ವಿಮಾನದಲ್ಲಿ ಸ್ಥಳಕ್ಕಾಗಿ ಇನ್ನಿಲ್ಲದ  ಹೋರಾಟ ನಡೆಸಿದ್ದರು. ಹೇಗಾದರೂ ಸರಿ  ದೇಶದಿಂದ  ಪರಾರಿಯಾಗಬೇಕೆಂಬ ಆತುರದಲ್ಲಿ ಕೆಲವರು ವಿಮಾನ ಏರಿ ಕುಳಿತಿದ್ದರು. ಈ ಕ್ರಮವಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದರು.

SCROLL FOR NEXT