ವಿದೇಶ

ಆಫ್ಘನ್ ಹೆಣ್ಣುಮಕ್ಕಳಿಗೆ ಮನೆಬಿಟ್ಟು ಹೊರ ಬರದಂತೆ ಸಲಹೆ: ನಮ್ಮ ಸೈನಿಕರು ಹೆಂಗಸರಿಗೆ ಗೌರವ ನೀಡುವ ತರಬೇತಿ ಪಡೆದಿಲ್ಲ ಎಂದ ತಾಲಿಬಾನ್

Harshavardhan M

ಕಾಬೂಲ್: ದೇಶದ ಮಹಿಳೆಯರು ಮನೆಯಿಂದ ಹೊರ ಬಾರದಂತೆ ತಾಲಿಬಾನ್ ಸಲಹೆ ನೀಡಿದೆ. ಕಳೆದ 9 ದಿನಗಳಲ್ಲಿ ತಾಲಿಬಾನ್ ಅಫ್ಘಾನಿಸ್ತಾನ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಾಗಿನಿಂದ ತಾಲಿಬಾನ್ ತಾನು ಈ ಹಿಂದೆ ಇದ್ದ ಕ್ರೂರ ಮನೋಭಾವವನ್ನು ತೊರೆದಿರುವುದಾಗಿ ಹೇಳಿಕೊಳ್ಳುತ್ತಾ ಬರುತ್ತಿದೆ. ಆದರೂ ಅಲ್ಲಿನ ಜನರಿಗೆ ತಾಲಿಬಾನ್ ಮೇಲೆ ಪೂರ್ಣ ವಿಶ್ವಾಸ ಬಂದಿಲ್ಲ. 

20 ವರ್ಷಗಳ ಹಿಂದೆ ತಾಲಿಬಾನ್ ಆಡಳಿತ ದೇಶದಲ್ಲಿ ಜಾರಿಯಲ್ಲಿದ್ದಾಗ ಮಹಿಳೆಯರು ಮನೆಯಿಂದ ಹೊರಬರುವಂತಿರಲಿಲ್ಲ. ಪರಪುರುಷರಿಗೆ ಮುಖ ತೋರುವಂತಿರಲಿಲ್ಲ. ಮಹಿಳೆ ತಪ್ಪಿಸ್ಥಳೆಂದು ಕಂಡುಬಂದರೆ ಸಾರ್ವಜನಿಕವಾಗಿ ಆಕೆಯನ್ನು ಥಳಿಸಲಾಗುತ್ತಿತ್ತು. ಕಲ್ಲೇಟಿನ ಶಿಕ್ಷೆ ವಿಧಿಸಲಾಗುತ್ತಿತ್ತು. 

ಆದರೆ ಈ ಬಾರಿ ತಾಲಿಬಾನಿ ನಾಯಕರು ತಾವು ಮೊದಲಿನಂತೆ ಇಲ್ಲ, ಬದಲಾಗಿದ್ದೇವೆ ಎಂದು ಹೇಳುತ್ತಲಿದ್ದರು. ಮಹಿಳೆ ಉದ್ಯೋಗ ನಿರ್ವಹಿಸಬಹುದು, ರಾಜಕಾರಣದಲ್ಲಿ ಪಾಲ್ಗೊಳ್ಳಬಹುದು ಎಂಬಿತ್ಯಾದಿ ಹೇಳಿಕೆಗಳನ್ನು ನೀಡುತ್ತಿದ್ದರು. 

ಅದರ ನಡುವೆಯೇ ತಾಲಿಬಾನಿ ನಾಯಕರು ಮನೆಯಿಂದ ಹೊರಬಾರದಂತೆ ಮಹಿಳೆಯರಿಗೆ ಸಲಹೆ ನೀಡಿದೆ. ಇದು ತಾತ್ಕಾಲಿಕವಾಗಿ ಅಷ್ಟೇ ಎಂದು ನಾಯಕರು ತಿಳಿಸಿದ್ದಾರೆ. 

ಬೀದಿಗಳಲ್ಲಿ ಪಹರೆ ಕಾಯುತ್ತಿರುವ ತಾಲಿಬಾನಿ ಸೈನಿಕರು ಮಹಿಳೆಯರೊಂದಿಗೆ ಗೌರವದಿಂದ ನಡೆದುಕೊಳ್ಳುವ ಪ್ರವೃತ್ತಿ ಹೊಂದಿಲ್ಲ. ಅವರು ಇನ್ನೂ ಹಳೆಯ ಮನೋಸ್ಥಿತಿಯನ್ನೇ ಹೊಂದಿದ್ದಾರೆ. 

ಹೊಸ ಬದಲಾವಣೆಗೆ ತೆರೆದುಕೊಳ್ಳಲು ಅವರಿಗೆ ಕೊಂಚ ಸಮಯ ತಗುಲುತ್ತದೆ. ಅಲ್ಲಿಯವರೆಗೆ ಆಫ್ಘನ್ ಮಹಿಳೆಯರು ಮನೆಯಲ್ಲಿರುವುದು ಕ್ಷೇಮ ಎಂದವರು ತಿಳಿಸಿದ್ದಾರೆ.

SCROLL FOR NEXT