ವಿದೇಶ

ರಾಜಕೀಯ ಅಸ್ಥಿರತೆ: ಮುಂದಿನ 4 ತಿಂಗಳಲ್ಲಿ ಅಫ್ಘಾನಿಸ್ತಾನ ತೊರೆಯಲಿರುವ 5 ಲಕ್ಷ ಮಂದಿ: ಯುಎನ್ ಹೆಚ್ ಸಿಆರ್

Srinivas Rao BV

ನವದೆಹಲಿ: ದೇಶದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ 4 ತಿಂಗಳಲ್ಲಿ 5 ಲಕ್ಷ ಮಂದಿ ಅಫ್ಘನ್ನರು ತಮ್ಮ ದೇಶವನ್ನು ತೊರೆಯಲಿದ್ದಾರೆ ಎಂದು ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಹೈಕಮಿಷನರ್ (ಯುಎನ್ ಹೆಚ್ ಸಿಆರ್)  ಅಂದಾಜಿಸಿದೆ.

ಯುಎನ್ ಹೆಚ್ ಸಿಆರ್ ಪ್ರಕಾರ ಈ ವರೆಗೂ ಸಾಮೂಹಿಕ ವಲಸೆ ಕಂಡುಬಂದಿಲ್ಲ. ಆದರೆ ಪರಿಸ್ಥಿತಿಯ ಬೆಳವಣಿಗೆಯಿಂದ ಮುಂದಿನ ದಿನಗಳಲ್ಲಿ ಸಾಮೂಹಿಕ ವಲಸೆ ಪ್ರಾರಂಭವಾಗಬಹುದು.

ಅಫ್ಘಾನಿಸ್ತಾನದಿಂದ ಈವರೆಗೂ ವಲಸೆ ಹೋಗುತ್ತಿರುವುದು ಖಚಿತವಾಗಿಲ್ಲ. ನಿರೀಕ್ಷೆಗೂ ಮೀರಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳು ಬೆಳವಣಿಗೆಯಾಗಿದೆ ಎಂದು ಡೆಪ್ಯುಟಿ ಹೈ ಕಮಿಷನರ್ ಕೆಲ್ಲಿ ಟಿ ಕ್ಲೆಮೆಂಟ್ಸ್ ಹೇಳಿದ್ದಾರೆ.

ಇದೇ ವೇಳೆ ಯುಎನ್ ಹೆಚ್ ಸಿಆರ್ ಅಫ್ಘನ್ ನಿರಾಶ್ರಿತರಿಗೆ ಗಡಿಗಳನ್ನು ಮುಕ್ತವಾಗಿಡುವಂತೆ ಅಫ್ಘಾನಿಸ್ತಾನದ ನೆರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ಇನ್ನು ವಿಶ್ವ ಆರೋಗ್ಯ ಯೋಜನೆ (ಡಬ್ಲ್ಯುಎಫ್ ಪಿ) ವಿಶ್ವಸಂಸ್ಥೆಗೆ ಮನವಿ ಮಾಡಿದ್ದು, ಅಗತ್ಯವಿರುವ ಅಫ್ಘನ್ನರಿಗೆ ಆಹಾರ ನೀಡುವುದಕ್ಕಾಗಿ ಸಂಸ್ಥೆಗೆ 12 ಮಿಲಿಯನ್ ಯುಎಸ್ ಡಾಲರ್ಸ್ ನೆರವು ನೀಡುವಂತೆ ಕೋರಿದೆ. ಅಫ್ಘಾನಿಸ್ತಾನದ ಸ್ಥಳಿಯರ ಪ್ರಕಾರ ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ನಿರುದ್ಯೋಗ ಸಮಸ್ಯೆಗಳು ದೇಶ ಬಿಡುವ ಸನ್ನಿವೇಶವನ್ನುಂಟುಮಾಡಿವೆ.

ದೇಶ ತೊರೆಯುವುದಕ್ಕೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಹಲವು ಸಾವಿರ ಕುಟುಂಬಗಳು ಕಾಯುತ್ತಿವೆ. ಈ ಪೈಕಿ ಇರುವ ಹಬೀಬುಲ್ಲಾ ಕುಟುಂಬ ಸದಸ್ಯರು ಮಾತನಾಡಿದ್ದು, ನಾಲ್ಕು ವರ್ಷಗಳ ಕಾಲ ವಿದೇಶಿಗರೊಂದಿಗೆ ಕೆಲಸ ಮಾಡಿದ್ದೇನೆ. ಈಗ ನನಗೆ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ತಾಲೀಬಾನಿಗಳು ವಿದೇಶಿಗರೊಂದಿಗೆ ಕೆಲಸ ಮಾಡಿದ್ದರಿಗಾಗಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ಕೇಳ್ಪಟ್ಟೆ. ಈ ಕಾರಣದಿಂದ ದೇಶ ತೊರೆಯಬೇಕಾಗಿದೆ ಎಂದು ಹಬೀಬುಲ್ಲ ಹೇಳಿದ್ದಾರೆ.

"ದೇಶದಲ್ಲಿ ಉಂಟಾಗಿರುವ ಭದ್ರತೆ ಸಮಸ್ಯೆಗಳು ಹಾಗೂ ನಿರುದ್ಯೋಗ ಸಮಸ್ಯೆಗಳು ನಮ್ಮನ್ನು ದೇಶ ತೊರೆಯುವಂತೆ ಮಾಡಿವೆ" ಎನ್ನುತ್ತಾರೆ ಹಬೀಬುಲ್ಲಾ ಅವರ ಪುತ್ರ

ಇನ್ನು ಮಹಿಳೆಯರು ಅತಂತ್ರ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ವಿದ್ಯಾವಂತರಾಗಿ ಶ್ರಮಿಸಿ ಕೆಲಸ ಮಾಡುತ್ತಿದ್ದವರಿಗೆ ಈಗ ತಮ್ಮ ಭವಿಷ್ಯ ಡೋಲಾಯಮಾನವಾಗಿದ್ದು ತಮಗೇನಾಗಲಿದೆ ಎಂಬುದೂ ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ.

SCROLL FOR NEXT