ವಿದೇಶ

ಮೂನ್ ಮಿಶನ್ ಟ್ರೇನಿಂಗ್: ಭಾರತೀಯ ಅನಿಲ್ ಮೆನನ್ ಸೇರಿ 10 ಮಂದಿ ನಾಸಾ ಯೋಜನೆಗೆ ಆಯ್ಕೆ

Vishwanath S

ವಾಷಿಂಗ್ಟನ್: ಮೊದಲ ಭಾರತೀಯ ವ್ಯಕ್ತಿ ಚಂದ್ರನ ಮೇಲೆ ಹೋಗುವ ಸಾಧ್ಯತೆ ಇದೆ. US ಬಾಹ್ಯಾಕಾಶ ಸಂಸ್ಥೆ NASA ತನ್ನ ಚಂದ್ರನ ಸಂಶೋಧನೆಗಾಗಿ 10 ತರಬೇತಿ ಗಗನಯಾತ್ರಿಗಳನ್ನು ಆಯ್ಕೆ ಮಾಡಿದೆ. ಈ ಯೋಜನೆಯಲ್ಲಿ ಭಾರತೀಯ ಮೂಲದ ಅನಿಲ್ ಮೆನನ್ ಸೇರ್ಪಡೆಯಾಗಿದ್ದಾರೆ.

45 ವರ್ಷದ ಅನಿಲ್ ಯುಎಸ್ ಏರ್ ಫೋರ್ಸ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ ಮತ್ತು ಸ್ಪೇಸ್‌ಎಕ್ಸ್‌ನಲ್ಲಿ ಫ್ಲೈಟ್ ಸರ್ಜನ್ ಆಗಿ ಅನುಭವ ಹೊಂದಿದ್ದಾರೆ. ನಾಸಾದ ಮೂನ್ ಮಿಶನ್  ಟ್ರೇನಿಂಗ್ ಗೆ ಆಯ್ಕೆಯಾದ 10 ಜನರಲ್ಲಿ 6 ಪುರುಷರು ಮತ್ತು 4 ಮಹಿಳೆಯರು ಇದ್ದಾರೆ. ನಾಸಾ 50 ವರ್ಷಗಳ ಬಳಿಕ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ತಯಾರಿ ನಡೆಸುತ್ತಿದೆ.

ಅನಿಲ್ ಮೆನನ್ ಕೂಡ ಭಾರತದಲ್ಲಿ ಸುಮಾರು ಒಂದು ವರ್ಷಗಳ ಕಾಲ ಪೊಲಿಯೋ ಅಧ್ಯಯನ ಮಾಡಿದ್ದಾರೆ. ಇದುವರೆಗೆ ಯಾವುದೇ ಭಾರತೀಯ ಗಗನಯಾತ್ರಿ ಚಂದ್ರನತ್ತ ಹೋಗಿಲ್ಲ. ಆದ್ರೂ ಇಲ್ಲಿಯವರೆಗೆ ಭಾರತದ ನಾಲ್ವರು ಬಾಹ್ಯಾಕಾಶಕ್ಕೆ ಅಂತರಿಕ್ಷ ಯಾಣ ಕೈಗೊಂಡಿದ್ದಾರೆ. ರಾಕೇಶ್ ಶರ್ಮಾ ಭಾರತದ ಮೊದಲ ಗಗನಯಾತ್ರಿ. ಇವರಲ್ಲದೆ ಭಾರತೀಯ ಮೂಲದ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಮತ್ತು ರಾಜಾ ಚಾರಿ ಅಂತರಿಕ್ಷಕ್ಕೆ ತೆರಳಿದ್ದಾರೆ. ಅನಿಲ್ ನಾಸಾದ ಚಂದ್ರಯಾನ ಕೈಗೊಂಡಿದ್ದೆಯಾದ್ರೆ, ಚಂದ್ರನತ್ತ ಹೋದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗಲಿದ್ದಾರೆ.

12 ಸಾವಿರ ಜನರಲ್ಲಿ 10 ಗಗನಯಾತ್ರಿಗಳ ಆಯ್ಕೆ                                                                                            ನಾಸಾದ ಮಹತ್ವಾಕಾಂಕ್ಷೆಯ ಮೂನ್ ಮಿಷನ್‌ಗೆ 12 ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ 10 ಮಂದಿ ಮಾತ್ರ ತರಬೇತಿಗೆ ಆಯ್ಕೆಯಾಗಿದ್ದಾರೆ. ತರಬೇತಿ ಪಡೆಯ ಇವರು ಮುಂದಿನ ವರ್ಷ ಜನವರಿಯಲ್ಲಿ ಟೆಕ್ಸಾಸ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಬಳಿಕ, ಈ ತಂಡ ಮತ್ತೆ  2 ವರ್ಷಗಳ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಸಾಸಾದ ಎಲ್ಲ ರೀತಿಯ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಅವರೆಲ್ಲರೂ ನಾಸಾದ ಆರ್ಟೆಮಿಸ್ ಜನರೇಷನ್ ಪ್ರೋಗ್ರಾಮ್ ನ ಭಾಗವಾಗಲಿದ್ದಾರೆ. ಈ ಕಾರ್ಯಕ್ರಮದ ಅಡಿ 2025 ರಲ್ಲಿ ಚಂದ್ರನ ಮೇಲ್ಮೈಗೆ ಮೊದಲ ಮಹಿಳೆ ಮತ್ತು ಪುರುಷನನ್ನು ಕಳುಹಿಸುವ ಯೋಜನೆಯನ್ನು ನಾಸಾ ಹಾಕಿಕೊಂಡಿದೆ.

ಅನಿಲ್ ಹೊರತಾಗಿ ಇತರ 9 ತರಬೇತುದಾರ ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ US ಏರ್ ಫೋರ್ಸ್ ಮೇಜರ್ ನಿಕೋಲ್ ಆಯರ್ಸ್ ಮತ್ತು ಮೇಜರ್ ಮಾರ್ಕೋಸ್ ಬೆರಿಯೊಸೊ, US ಮೆರೈನ್ ಕಾರ್ಪ್ಸ್ ನ ಮೇಜರ್ (ನಿವೃತ್ತ) ಲ್ಯೂಕ್ ಡೆಲಾನಿ, US ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಜೆಸ್ಸಿಕಾ ವಿಟ್ನರ್ ಮತ್ತು ಲೆಫ್ಟಿನೆಂಟ್ ಡೆನಿಜ್ ಬರ್ನ್‌ಹ್ಯಾಮ್, ಯುಎಸ್ ನೇವಿಯ ಜೈಕ್ ಹ್ಯಾಥವೇ, ಕ್ರಿಸ್ಟೋಫರ್ ವಿಲಿಯಮ್ಸನ್ ಸೇರಿದಂತೆ ಕ್ರಿಸ್ಟಿನಾ ಬಿರ್ಚೌ ಮತ್ತು ಆಂಡ್ರೆ ಡೌಗ್ಲಾಸ್ ಆಯ್ಕೆಯಾಗಿದ್ದಾರೆ.

ಅನಿಲ್ ಮೆನನ್ ಯಾರು?                                                                                                                            ಅನಿಲ್ ಮೆನನ್ ಅವರ ಪೋಷಕರು ಭಾರತೀಯ ಮತ್ತು ಉಕ್ರೇನಿಯನ್ ಆಗಿದ್ದಾರೆ. ಇವರೆಲ್ಲ ಅಮೆರಿಕದ ಮಿನ್ನೇಸೋಟದಲ್ಲಿ ನೆಲಸಿದ್ದಾರೆ. ಅನಿಲ್ ಮೆನನ್  ಅವರು 1999 ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ನ್ಯೂರೋಬಯಾಲಜಿಯಲ್ಲಿ ಪದವಿ ಪಡೆದರು. 2004 ರಲ್ಲಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಹಾಗೂ ಸ್ಟ್ಯಾನ್‌ಫೋರ್ಡ್ ವೈದ್ಯಕೀಯ ಶಾಲೆಯಿಂದ ಡಾಕ್ಟರೇಟ್ ಪದವಿಯನ್ನೂ ಸಹ ಪಡೆದಿದ್ದಾರೆ. ಅಲ್ಲದೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಸಾದ ಹಲವಾರು ಯೋಜನೆಗಳಿಗೆ ಅನಿಲ್ ಮೆನನ್ ಸೇವೆ ಸಲ್ಲಿಸಿದ್ದಾರೆ.

SpaceX ಗಾಗಿ ಕೆಲಸ                                                                                                                                2014 ರಲ್ಲಿ, ಅವರು NASA ಗಾಗಿ ಫ್ಲೈಟ್ ಸರ್ಜನ್ ಆಗಿ ವೃತ್ತಿ ಪ್ರಾರಂಭಿಸಿದರು. ಅಲ್ಲದೆ, ಸೋಯುಜ್ ಮಿಷನ್‌ನಲ್ಲಿಯೂ ಅನಿಲ್ ಮೆನನ್ ಪಾಲ್ಗೊಂಡಿದ್ದರು. 2018 ರಲ್ಲಿ, ಅವರು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ ಕಂಪನಿಗೆ ಸೇರಿಕೊಂಡರು. ಸ್ಪೇಸ್ ಎಕ್ಸ್ ಕಂಪನಿಯ ಮೊದಲ ಮಾನವ ಹಾರಾಟಕ್ಕೆ ಮೆಡಿಕಲ್ ಪ್ರೋಗ್ರಾಮ್, ಸ್ಟಾರ್‌ಶಿಪ್‌ಗಳ ನಿರ್ಮಾಣ, ಗಗನಯಾತ್ರಿ ಯೋಜನೆಗಳು, ಉಡಾವಣಾ ಕಾರ್ಯಕ್ರಮಗಳಲ್ಲಿ ಅನಿಲ್ ಮೆನನ್ ಈವರೆಗೆ ಸೇವೆ ಸಲ್ಲಿಸಿದ್ದಾರೆ.

SCROLL FOR NEXT