ವಿದೇಶ

ತಾಲಿಬಾನ್ ಆಡಳಿತದ ಮಹಾ ಎಡವಟ್ಟು: ಶತ್ರು ರಾಷ್ಟ್ರಕ್ಕೆ 6 ಕೋಟಿ ಹಣ ವರ್ಗಾಯಿಸಿ, ಈಗ ವಾಪಸ್ ನೀಡುವಂತೆ ಮನವಿ!!!

Srinivasamurthy VN

ಕಾಬೂಲ್: ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದಿದ್ದ ತಾಲಿಬಾನ್ ಸರ್ಕಾರ ಮಹಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಆಕಸ್ಮಿಕವಾಗಿ ತನ್ನ ಶತ್ರುರಾಷ್ಟ್ರ ಕೋಟ್ಯಂತರ ಹಣವನ್ನು ರವಾನೆ ಮಾಡಿ ಈಗ ಅದನ್ನು ವಾಪಸ್ ನೀಡುವಂತೆ ಗೋಗರೆಯುತ್ತಿದೆ.

ಹೌದು..  ಅಧಿಕಾರದ ಗಂಧವೇ ಗೊತ್ತಿಲ್ಲದ ತಾಲಿಬಾನ್ ಗೆ ಅಫ್ಘಾನಿಸ್ತಾನದಲ್ಲಿ ಅಂಧಾ ದರ್ಬಾರ್ ನಡೆಸುತ್ತಿದೆ. ತಾವು ಮಾಡಿದ ತಪ್ಪಿನಿಂದಾಗಿ ಕೋಟ್ಯಂತರ ರೂಪಾಯಿಯನ್ನು ಕಳೆದುಕೊಂಡಿರುವ ಪ್ರಸಂಗವೊಂದು ಇದೀಗ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್‌ನಲ್ಲಿ ತಾಲಿಬಾನ್ ಆಡಳಿತವು ತಜಕಿಸ್ತಾನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಖಾತೆಗೆ ತಪ್ಪಾಗಿ 8 ಲಕ್ಷ ಡಾಲರ್ ಹಣ (ಸುಮಾರು 6 ಕೋಟಿ ರೂ)ವನ್ನು ವರ್ಗಾಯಿಸಿತ್ತು. ತನ್ನ ತಪ್ಪಿನ ಅರಿವಾದ ನಂತರ, ತಾಲಿಬಾನ್ ಹಣವನ್ನು ಹಿಂದಿರುಗಿಸುವಂತೆ ಕೇಳಿಕೊಂಡಿದೆ. ಆದರೆ, ಖಾತೆಗೆ ಜಮೆಯಾದ ಹಣವನ್ನು ತಜಕಿಸ್ತಾನ ಸರ್ಕಾರ ವಾಪಸ್ ನೀಡಲು ನಿರಾಕರಿಸುತ್ತಿದೆ.

ಅಫ್ಘನ್ ನ ಅಶ್ರಫ್ ಘನಿ ಅವಧಿಯಲ್ಲಿ ತಜಕಿಸ್ತಾನದ ರಾಯಭಾರಿಯಾಗಿ ನೇಮಕಗೊಂಡ ಮೊಹಮ್ಮದ್ ಜಹೀರ್ ಅಘಾಬರ್ ಹೇಳಿಕೆ ಪ್ರಕಾರ, ಹಿಂದಿನ ಸರ್ಕಾರ ಈ ಹಣವನ್ನು ನೌಕರರಿಗೆ ಮುಂಬರುವ ವೆಚ್ಚಗಳು ಮತ್ತು ಸಂಬಳಕ್ಕಾಗಿ ಅನುಮೋದನೆ ನೀಡಿತ್ತು. ಆದರೆ ತಾಲಿಬಾನ್ ವಶಪಡಿಸಿಕೊಂಡ ಬಳಿಕ ಪರಿಸ್ಥಿತಿ ಬದಲಾಗಿದೆ. ಈ ಹಣವನ್ನು ರಾಯಭಾರ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಖರ್ಚು ಮಾಡಲಾಗಿದೆ. ಹೀಗಾಗಿ ಅದನ್ನು ವಾಪಸ್ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ ಎಂದು ಹೇಳಿದ್ದಾರೆ.

ತಾಲಿಬಾನ್ ಆರೋಪ ನಿರಾಕರಿಸಿದ ತಜಕಿಸ್ತಾನ
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ತಜಕಿಸ್ತಾನ ಸರ್ಕಾರ, 'ಆಗಸ್ಟ್ ನಲ್ಲಿ ಚುಕ್ಕಾಣಿ ಹಿಡಿದ ತಾಲಿಬಾನ್, ಆರಂಭದಲ್ಲಿ, ಈ ವಿಷಯದ ಬಗ್ಗೆ ಏನನ್ನೂ ಹೇಳಲಿಲ್ಲ. ಆದರೆ ನವೆಂಬರ್‌ನಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟ ಬಳಿಕ ಹಣವನ್ನು ಹಿಂತಿರುಗಿಸಬೇಕೆಂದು ಸಂಪರ್ಕ ಮಾಡಿತು. ಈ ಹಣವನ್ನು ರಾಯಭಾರ ಕಚೇರಿಯ ಉದ್ಯೋಗಿಗಳಿಗೆ ನೀಡಲಾಗುತ್ತಿದೆ. ರಾಯಭಾರ ಕಚೇರಿ ಮತ್ತು ಅಫ್ಘಾನಿಸ್ತಾನದ ನಾಗರಿಕರ ಅಗತ್ಯಗಳನ್ನು ಪೂರೈಸಲು ಸಂಪೂರ್ಣ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದೆ.

ತಜಕಿಸ್ತಾನ್ ತಾಲಿಬಾನ್‌ನ ಬದ್ಧ ವಿರೋಧಿಯಾಗಿದ್ದು, ತಾಲಿಬಾನ್ ಅನ್ನು ಭಯೋತ್ಪಾದನೆ ಸಂಘಟನೆ ಎಂದು ಪರಿಗಣಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಭಯೋತ್ಪಾದನೆ ಸಂಘಟನೆಯ ಖಾತೆಗೆ ಹಣ ಜಮೆ ಮಾಡಲು ಸಾಧ್ಯವಿಲ್ಲ ಎಂದೂ ತಜಕಿಸ್ತಾನ ಸ್ಪಷ್ಟಪಡಿಸಿದೆ.

SCROLL FOR NEXT