ಬೀಜಿಂಗ್: ಯುದ್ಧಗ್ರಸ್ತವಾಗಿರುವ ಅಫ್ಘಾನಿಸ್ತಾನದಲ್ಲಿ ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂಪಡೆಯುತ್ತಿದ್ದು, ತಾಲೀಬಾನ್ ಅಫ್ಘಾನಿಸ್ತಾನದಲ್ಲಿ ಪ್ರಾಂತ್ಯಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ.
ಈ ನಡುವೆ ಚೀನಾ ಬಗ್ಗೆ ಅಫ್ಘಾನಿಸ್ತಾನದ ತಾಲೀಬಾನ್ ಪ್ರತಿಕ್ರಿಯೆ ನೀಡಿದ್ದು, ಚೀನಾವನ್ನು ತಾಲೀಬಾನ್ ಸ್ನೇಹಿತನ ರೀತಿಯಲ್ಲಿ ನೋಡುವುದಾಗಿ ತಿಳಿಸಿದ್ದು ಉಯ್ಘರ್ ಮುಸ್ಲಿಮ್ ಉಗ್ರರಿಗೆ ಉತ್ತೇಜನ ನೀಡುವುದಿಲ್ಲ ಎಂದೂ ಭರವಸೆ ನೀಡಿದೆ.
ಚೀನಾದಲ್ಲಿ ಉಯ್ಘರ್ ಪ್ರಾಂತ್ಯದಲ್ಲಿರುವ ಮುಸ್ಲಿಮರು ಪ್ರತ್ಯೇಕತಾವಾದಿಗಳಾಗಿದ್ದು, ಚೀನಾ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ವಾರ ಚೀನಾ ಅಫ್ಘಾನಿಸ್ತಾನದಿಂದ ತನ್ನ ದೇಶದ 210 ಪ್ರಜೆಗಳನ್ನು ವಾಪಸ್ ಕರೆಸಿಕೊಂಡಿತ್ತು. ತಾಲೀಬಾನ್ ಆಡಳಿತ ಬಂದಲ್ಲಿ ಅಫ್ಘಾನಿಸ್ತಾನ ಈಸ್ಟ್ ತುರ್ಕಿಸ್ತಾನ ಇಸ್ಲಾಮಿಕ್ ಚಳುವಳಿಯ (ಇಟಿಐಎಂ) ನ ಕೇಂದ್ರವಾಗಲಿದ್ದು, ಕ್ಸಿನ್ ಜಿಯಾಂಗ್ ನಲ್ಲಿ ದಂಗೆ ಉಂಟಾಗಲಿದೆ ಎಂಬ ಆತಂಕ ಚೀನಾವನ್ನು ಕಾಡುತ್ತಿದೆ.
ಸಂಪನ್ಮೂಲಭರಿತ ಕ್ಸಿನ್ ಜಿಯಾಂಗ್ ಅಫ್ಘಾನಿಸ್ತಾನದೊಂದಿಗೆ 8 ಕಿ.ಮೀ ನಷ್ಟು ಗಡಿಯನ್ನು ಹಂಚಿಕೊಂಡಿದೆ. ಚೀನಾದ ಆತಂಕವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ತಾಲೀಬಾನ್ ನ ವಕ್ತಾರ ಸುಹೇಲ್ ಶಹೀನ್ "ತಾಲೀಬಾನ್ ಚೀನಾವನ್ನು ಸ್ನೇಹಿತನನ್ನಾಗಿ ನೋಡುತ್ತದೆ. ಶೀಘ್ರವೇ ಮರುನಿರ್ಮಾಣ ಕಾಮಗಾರಿಯಲ್ಲಿ ಹೂಡಿಕೆಯ ಸಂಬಂಧ ಮಾತುಕತೆ ನಡೆಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ ತಾಲೀಬಾನ್ ಸಂಘಟನೆ ಚೀನಾದ ಕ್ಸಿನ್ ಜಿಯಾಂಗ್ ಭಾಗದ ಉಯ್ಘರ್ ಪ್ರತ್ಯೇಕತಾವಾದಿಗಳನ್ನು ಬಿಟ್ಟುಕೊಳ್ಳುವುದಿಲ್ಲ ಎಂದು ಹೇಳಿದೆ. ಉಯ್ಘರ್ ಪ್ರತ್ಯೇಕತಾವಾದಿಗಳ ಪೈಕಿ ಹಲವರು ಅಫ್ಘಾನಿಸ್ತಾನದಲ್ಲಿ ಆಶ್ರಯ ಪಡೆಯಲು ಯತ್ನಿಸಿದ್ದರು.