ನ್ಯೂಯಾರ್ಕ್: ಅಂಟಾರ್ಕ್ಟಿಕ್ ನಲ್ಲಿ ಹಿಮದಿಂದ ಆವೃತವಾದ ಬೃಹತ್ ಸರೋವರವೊಂದು ಮೂರೇ ದಿನದಲ್ಲಿ ಸಾಗರ ಸೇರಿರುವ ಘಟನೆಯನ್ನು ಸಂಶೋಧಕರ ತಂಡ ಪತ್ತೆ ಮಾಡಿದೆ.
ವಿಜ್ಞಾನಿಗಳು ಈ ಘಟನೆ ಪುನಃ ನಡೆಯಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. 2019 ರಲ್ಲಿ ನಡೆದಿರುವ ಈ ಘಟನೆಯ ಚಿತ್ರಣ ಉಪಗ್ರಹಗಳ ಮೂಲಕ ಲಭ್ಯವಾಗಿದ್ದು, ಬೃಹತ್ ಸಹೋರವರ ಮಾಯವಾಗಿರುವ ಪರಿಣಾಮ 21 ಬಿಲಿಯನ್ ನಿಂದ 26 ಬಿಲಿಯನ್ ಕ್ಯುಬಿಕ್ ಅಡಿ (600 ಮಿಲಿಯನ್-750 ಮಿಲಿಯನ್ ಕ್ಯುಬಿಕ್ ಮೀಟರ್ ಗಳಷ್ಟು) ಅಂದರೆ ಸಮುದ್ರ ಸೇರಿರುವುದರ ಪರಿಣಾಮ ಸ್ಯಾನ್ ಡಿಯಾಗೋ ಕೊಲ್ಲಿಗಿಂತಲೂ ಎರಡು ಪಟ್ಟು ನೀರು ಸಮುದ್ರಕ್ಕೆ ಸೇರಿದೆ.
2019 ರ ಚಳಿಗಾಲದಲ್ಲಿ ಪೂರ್ವ ಅಂಟಾರ್ಕ್ಟಿಕ್ ನ ಅಮೆರಿ ಐಸ್ ಶೆಲ್ಫ್ (ತೇಲುವ ಮಂಜುಗಡ್ಡೆ) ಪ್ರದೇಶದಲ್ಲಿ ಈ ಘಟನೆ ನಡೆದಿರುವುದನ್ನು ಲೈವ್ ಸೈನ್ಸ್ ವರದಿ ಮಾಡಿದೆ.
ನೀರಿನ ತೂಕ ಹೆಚ್ಚಾದ ಪರಿಣಾಮ ಸರೋವರದ ತಳದಲ್ಲಿದ್ದ ಐಸ್ ಶೆಲ್ಫ್ (ತೇಲುವ ಮಂಜುಗಡ್ಡೆ) ಬಿರುಕು ಬಿಟ್ಟಿದೆ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ, ಈ ಪ್ರಕ್ರಿಯೆಗೆ ಹೈಡ್ರೋಫ್ರಾಕ್ಚರ್ ಎನ್ನುತ್ತೇವೆ ಎಂದು ತಸ್ಮಾನಿಯಾ ವಿವಿಯ ರೊಲ್ಯಾಂಡ್ ವಾರ್ನರ್ ಎಂಬ ಸಂಶೋಧಕ ಹಾಗೂ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ನೀರು ಸಮುದ್ರದೆಡೆಗೆ ಭೋರ್ಗರೆಯಲು ಪ್ರಾರಂಭಿಸಿದಾಗ ನಯಾಗರಾ ಫಾಲ್ಸ್ ಹರಿವು ಇದ್ದಂತೆ ಇದ್ದಿರಬಹುದು ಎಂದೂ ವಿಜ್ಞಾನಿಗಳು ಹೇಳಿದ್ದಾರೆ. ಕರಗಿದ ನೀರಿನ ಪ್ರದೇಶ ಹೆಚ್ಚಾದಷ್ಟೂ ಹೈಡ್ರೋಫ್ರಾಕ್ಚರಿಂಗ್ ಹೆಚ್ಚಾಗಲಿದೆ ತತ್ಪರಿಣಾಮ ಮಂಜುಗಡ್ಡೆಗಳು ಕುಸಿದು, ನೀರು ಸಮುದ್ರಕ್ಕೆ ಸೇರಿ ಸಮುದ್ರದ ಮಟ್ಟ ಹೆಚ್ಚಾಗಲಿದೆ ಎಂಬ ಆತಂಕ ಈಗ ಹೆಚ್ಚಾಗತೊಡಗಿದೆ. ಅಂಟಾರ್ಕ್ಟಿಕ್ ಪ್ರದೇಶದಲ್ಲಿನ ಹಿಮಕರಗುವಿಕೆ 2050ರ ವೇಳೆಗೆ ದ್ವಿಗುಣಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.