ವಿದೇಶ

10 ಟ್ರಿಲಿಯನ್ ಡಾಲರ್ ಪರಿಹಾರ ಕೇಳಿದ ಟ್ರಂಪ್ ಹೇಳಿಕೆಗೆ ಚೀನಾ ಪ್ರತಿಕ್ರಿಯೆ ನೀಡಿದ್ದು ಹೀಗೆ...

Srinivas Rao BV

ಬೀಜಿಂಗ್: ಕೊರೋನಾ ಸೋಂಕ ವಿಶ್ವಾದ್ಯಂತ ಹರಡುವುದಕ್ಕೆ ಕಾರಣವಾದ ಚೀನಾ 10 ಟ್ರಿಲಿಯನ್ ಡಾಲರ್ ಪರಿಹಾರ ನೀಡಬೇಕೆಂಬ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಗೆ ಚೀನಾ ಪ್ರತಿಕ್ರಿಯೆ ನೀಡಿದೆ.

ಜನರ ಜೀವ ಹಾಗೂ ಆರೋಗ್ಯವನ್ನು ನಿರ್ಲಕ್ಷ್ಯಿಸಿರುವ ರಾಜಕಾರಣಿಗಳು ಹೊಣೆಗಾರರು ಎಂದು ಚೀನಾ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದೆ.

ಭಾನುವಾರದಂದು ರಿಪಬ್ಲಿಕನ್ ಪಾರ್ಟಿ ಕನ್ವೆನ್ಷನ್ ನಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಕೋವಿಡ್-19 ನ್ನು ಚೀನಾ ವೈರಸ್, ವುಹಾನ್ ವೈರಸ್ ಎಂದು ಹೇಳಿ, ಜಗತ್ತಿಗೆ ಚೀನಾ ಪರಿಹಾರವನ್ನು ನೀಡಬೇಕು, ಅಮೆರಿಕಾಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು.

ಕೋವಿಡ್-19 ನಿಂದ ಉಂಟಾಗಿರುವ ಸಾವು ನೋವುಗಳಿಗೆ ಚೀನಾ ಅಮೆರಿಕ ಹಾಗೂ ವಿಶ್ವಸಮುದಾಯಕ್ಕೆ ಪರಿಹಾರದ ರೂಪದಲ್ಲಿ 10 ಟ್ರಿಲಿಯನ್ ಡಾಲರ್ ನ್ನು ನೀಡಬೇಕೆಂದು ಆಗ್ರಹಿಸಿದ್ದರು.

ಈ ಬಗ್ಗೆ ಚೀನಾದ ವಿದೇಶಾಂಗ ವಕ್ತಾರ ವಾಂಗ್ ವೆನ್ಬಿನ್ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಆಡಳಿತಾವಧಿಯಲ್ಲಿ 2.4 ಕೋಟಿ ಕೋವಿಡ್-19 ಪ್ರಕರಣಗಳು ವರದಿಯಾಗಿತ್ತು. 410 ,000 ಮಂದಿ ಸಾವನ್ನಪ್ಪಿದ್ದರು.

ವಾಸ್ತವವನ್ನು ನಿರಂತರವಾಗಿ ನಿರಾಕರಿಸುತ್ತಿದ್ದ ಟ್ರಂಪ್, ಕರ್ತವ್ಯಗಳನ್ನು ನಿರ್ಲಕ್ಷ್ಯಿಸಿದರು. ಸಾಂಕ್ರಮಿಕ ನಿಯಂತ್ರಣಕ್ಕೆ ಪ್ರಯತ್ನಿಸುವ ಬದಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸಿದ್ದರು ಎಂದು ಚೀನಾ ಆರೋಪಿಸಿದೆ.

ಅಮೆರಿಕಾದ ಜನತೆ ಯಾರನ್ನು ಹೊಣೆಗಾರರನ್ನಾಗಿಸಬೇಕು ಎಂಬ ಬಗ್ಗೆ ಉತ್ತಮ ತೀರ್ಪು ತೆಗೆದುಕೊಂಡಿದ್ದಾರೆ ಎಂದು ನಾವು ನಂಬಿದ್ದೇವೆ. ಅವರು ಬೂಟಾಟಿಕೆಯ, ಜನರ ಆರೋಗ್ಯವನ್ನು ನಿರ್ಲಕ್ಷ್ಯಿಸಿದ್ದ ರಾಜಕಾರಣಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಚೀನಾ ಹೇಳಿದೆ.

SCROLL FOR NEXT