ವಿದೇಶ

ಮೆಕ್ಸಿಕೊ ಸಿಟಿ ಮೆಟ್ರೊ ಓವರ್‌ಪಾಸ್ ರಸ್ತೆಗೆ ಕುಸಿದು 15 ಸಾವು, 70 ಮಂದಿಗೆ ಗಾಯ

Raghavendra Adiga

ಮೆಕ್ಸಿಕೋ ಸಿಟಿ: ಮೆಕ್ಸಿಕೊ ನಗರದ ಮೆಟ್ರೊದ ಓವರ್‌ಪಾಸ್ ಕುಸಿದು, ರಸ್ತೆಯ ಕಡೆಗೆ ಬಿದ್ದಾಗ ಅದರ ಮೇಲೆ ಚಲಿಸುತ್ತಿದ್ದ ರೈಲು ಸಹ ರಸ್ತೆಗೆ ಬಿದ್ದು ಕನಿಷ್ಠ 15 ಜನ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ರಸ್ತೆಯ ಮೇಲೆ ಸಂಚರಿಸುತ್ತಿದ್ದ ಕಾರೊಂದು ನುಜ್ಜುಗುಜ್ಜಾಗಿದೆ. ಇನ್ನು ಘಟನೆಯಲ್ಲಿ 70 ಜನರು ಗಾಯಗೊಂಡಿದ್ದಾರೆ 34 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಮತ್ತುಇನ್ನೂ ಕೆಲ ಸಂಖ್ಯೆಯ ಜನರು ರೈಲಿನಲ್ಲೇ ಸಿಲುಕಿದ್ದಾರೆ, ರೈಲು ಎರಡು ತುಂಡಾಗಿದ್ದು ಭಾಗಶಃ ಹಾನಿಯಾಗಿದೆ.

ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ಕಾರನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಕುಸಿದ ಮೆಟ್ರೋ ಓವರ್‌ಪಾಸ್ ಭಗ್ನಾವಶೇಷದಡಿ ಶೋಧಕಾರ್ಯಾಚರಣೆ ನಡೆದಿದೆ. ಓವರ್‌ಪಾಸ್ ದಕ್ಷಿಣ ಮೆಕ್ಸಿಕೊ ನಗರದ ರಸ್ತೆಯಿಂದ ಸುಮಾರು 5 ಮೀಟರ್ ದೂರದಲ್ಲಿತ್ತು. " ರೈಲಿನೊಳಗೆ ಇನ್ನೂ ಜನರು ಸಿಕ್ಕಿಬಿದ್ದಿದ್ದಾರೆ, ಆದರೂ "ಅವರು ಜೀವಂತವಾಗಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ" ಮೇಯರ್ ಕ್ಲೌಡಿಯಾ ಶೀನ್ಬೌಮ್ ಹೇಳಿದ್ದಾರೆ.

ಮೆಟ್ರೊದ 12 ನೇ ಲೇನ್ ನಲ್ಲಿ ಅಪಘಾತ ಸಂಭವಿಸಿದ್ದು, ಇದರ ನಿರ್ಮಾಣ ಸಂಬಂಧ ದೂರುಗಳು ಮತ್ತು ಅಕ್ರಮಗಳ ಆರೋಪ ಕೇಳಿಬಂದಿತ್ತು. "ಇದೊಂದು ಭಯಾನಕ ದುರಂತ" ಎಂದು ಮೆಕ್ಸಿಕನ್ ವಿದೇಶಾಂಗ ಸಚಿವ ಮಾರ್ಸೆಲೊ ಎಬ್ರಾರ್ಡ್ ಟ್ವೀಟ್ ಮಾಡಿದ್ದಾರೆ.

ಮೆಕ್ಸಿಕೊ ಸಿಟಿ ಮೆಟ್ರೊ, ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾಗಿದೆ, ಅರ್ಧ ಶತಮಾನದ ಹಿಂದೆ ಉದ್ಘಾಟನೆಯಾದ ಈ ಮಾರ್ಗದಲ್ಲಿ  ಇದುವರೆಗೆ ಕನಿಷ್ಠ ಎರಡು ಗಂಭೀರ ಅಪಘಾತಗಳು ಸಂಭವಿಸಿವೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಟಕುಬಯಾ ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 41 ಜನರು ಗಾಯಗೊಂಡಿದ್ದರು.. 2015 ರಲ್ಲಿ, ಸಮಯಕ್ಕೆ ಸರಿಯಾಗಿ ನಿಲ್ಲದ ರೈಲು ಓಷಿಯಾನಿಯಾ ನಿಲ್ದಾಣದಲ್ಲಿ ಇನ್ನೊಂದು ರೈಲಿಗೆ ಡಿಕ್ಕಿ ಹೊಡೆದಿದ್ದು, 12 ಜನರು ಗಾಯಗೊಂಡಿದ್ದರು.

SCROLL FOR NEXT