ವಿದೇಶ

ಟಿಕ್‌ಟಾಕ್‌ ವಿಡಿಯೋ ಮಾಡುವಾಗ ನದಿಗೆ ಬಿದ್ದು ಪಾಕಿಸ್ತಾನಿ ವ್ಯಕ್ತಿ ಜಲಸಮಾಧಿ

Raghavendra Adiga

ಲಾಹೋರ್: ಟಿಕ್‌ಟಾಕ್‌ಗಾಗಿ ವಿಡಿಯೋ ಮಾಡುತ್ತಲೇ 25 ವರ್ಷದ ಪಾಕಿಸ್ತಾನಿ ವ್ಯಕ್ತಿಯೊಬ್ಬ ಪಂಜಾಬ್ ಪ್ರಾಂತ್ಯದ ಝೀಲಂ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮೃತನನ್ನು  ಶೇಖ್ ಅಲಿ ಎಂದು ಗುರುತಿಸಲಾಗಿದ್ದು ಈತ ಸ್ನೇಹಿತರೊಂದಿಗೆ ಪಂಜಾಬ್ ಪ್ರಾಂತ್ಯದ ನೆಕೊಕಾರಾದ ನದಿಗೆ ಬೀಳುವುದನ್ನು ವಿಡಿಯೋ ಮಾಡಲು ಉದ್ದೇಶಿಸಿದ್ದಾನೆ. ಅದರಂತೆ ನದಿಗೆ ನೆಗೆಯುವುದನ್ನು ಅವನ ಸ್ನೇಹಿತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಆದರೆ ಶೇಖ್ ಅಲಿ ನೀರಿಗೆ ಬಿದ್ದವನು ಮತ್ತೆ ಹೊರಬರದೆ ಹೋದಾಗ ಇದು ದುರಂತದ ರೂಪ ಪಡೆಯಿತು. ತಕ್ಷಣ ರಕ್ಷಣಾ ಪಡೆ ಮುಳುಗು ಪರಿಣಿತರು ನೀರಿಗಿಳಿದು ಆತನ ದೇಹಕ್ಕಾಗಿ ಶೋಧ ನಡೆಸಿದ್ದರೂ ಇದುವರೆಗೆ ಮೃತದೇಹ ಪತ್ತೆಯಾಗಿಲ್ಲ ಎಂದು ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ನದಿಗೆ ಧುಮುಕಿದ ಅಲಿಯ ಸ್ನೇಹಿತನು ಸುರಕ್ಷಿತವಾಗಿದ್ದಾನೆ. ವಿಡಿಯೋ ಶೇರಿಂಗ್ ಸಾಮಾಜಿಕ ನೆಟ್ ವರ್ಕಿಂಗ್ ಅಪ್ಲಿಕೇಷನ್ ಟಿಕ್ ಟಾಕ್ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದೆ. ಆದಾಗ್ಯೂ, ಹಲವಾರು ಅಪಾಯಕಾರಿ ವಿಡಿಯೋಗಳನ್ನು ಚಿತ್ರೀಕರಿಸುವ ಹಿನ್ನೆಲೆ  ಈವರೆಗೆ ಹಲವಾರು ಯುವಕರು ಸಾವನ್ನಪ್ಪಿದ್ದಾರೆ

ಕಳೆದ ವಾರ, 19 ವರ್ಷದ ಯುವಕ ಸಹ ವಿಡಿಯೋ ಚಿತ್ರೀಕರಣ ಮಾಡುವ ವೇಳೆ ಮೃತಪಟ್ಟಿದ್ದನು. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ ಯುವಕ ತಲೆಗೆ ಗನ್ ಇಟ್ಟು ಟ್ರಿಗರ್ ಎಳೆದಿದ್ದನು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಸರ್ಕಾರ ಟಿಕ್‌ಟಾಕ್ ಅನ್ನು ನಿಷೇಧಿಸಿತ್ತು. ಸ್ಥಳೀಯ ಕಾನೂನುಗಳಿಗೆ ಅನುಸಾರವಾಗಿ, ಅಶ್ಲೀಲತೆ ಮತ್ತು ಅನೈತಿಕತೆಯನ್ನು ಹರಡುವಲ್ಲಿ  ತೊಡಗಿರುವ ಎಲ್ಲಾ ಖಾತೆಗಳನ್ನು ನಿರ್ಬಂಧಿಸುವುದಾಗಿ ಕಂಪನಿ ಭರವಸೆ ನೀಡಿದತಿಂಗಳ ನಂತರ ನಿಷೇಧವನ್ನು ಹಿಂಪಡೆಯಲಾಗಿತ್ತು.
 

SCROLL FOR NEXT