ವಿದೇಶ

COP-26 ಸಮ್ಮೇಳನ: 'ಒಬ್ಬನೇ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್‌' ಗೆ ಪ್ರಧಾನಿ ಮೋದಿ ಕರೆ

Srinivas Rao BV

ಗ್ಲಾಸ್ಗೋ: ಇಡೀ ಜಗತ್ತಿಗೆ ಸೂರ್ಯನೇ ಮೂಲಧಾರ.. ಸೌರ ವಿದ್ಯುತ್‌ ಅನ್ನು ಮಾನವ ಕುಲ ಯಶಸ್ವಿಯಾಗಿ ಬಳಸಿ ಬದುಕು ಸಾಗಿಸಲು ಜಾಗತಿಕ ಸೋಲಾರ್ ಗ್ರಿಡ್ ಸ್ಥಾಪಿಸಬೇಕು ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ‘ಒಬ್ಬನೇ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’. ಎಂದು ಅವರು ಕರೆ ನೀಡಿದ್ದಾರೆ. ಹವಾಮಾನ ಬದಲಾವಣೆ ಕುರಿತ COP-26 ಸಮ್ಮೇಳನದಲ್ಲಿ " ಸ್ವಚ್ಚ ತಂತ್ರಜ್ಞಾನಗಳ ಆವಿಷ್ಕಾರದ ವೇಗವರ್ಧಿಸುವುದು - ಅವುಗಳನ್ನು ಬಳಸುವುದು" ಎಂಬ ವಿಷಯ ಕುರಿತು ಮೋದಿ ಅವರು ಮಂಗಳವಾರ ಗ್ಲಾಸ್ಗೋದಲ್ಲಿ ವಿಶ್ವ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವದ ಯಾವುದೇ ಪ್ರದೇಶದಲ್ಲಿ ಸೌರ ವಿದ್ಯುತ್ ಉತ್ಪಾದನೆ ಅವಕಾಶ, ಸಾಮರ್ಥ್ಯ ಗಳ ಲೆಕ್ಕಾಚಾರ ಮಾಡುವ ಕ್ಯಾಲ್ಕುಲೇಟರ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶೀಘ್ರದಲ್ಲೇ ಜಗತ್ತಿಗೆ ಒದಗಿಸಲಿದೆ. ಉಪಗ್ರಹಗಳು ನೀಡುವ ದತ್ತಾಂಶಗಳ ಆಧಾರದ ಮೇಲೆ ಇದು ಕೆಲಸ ಮಾಡುತ್ತದೆ ಎಂದು ಅವರು ಹೇಳಿದರು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ, ಪಳೆಯುಳಿಕೆ ಇಂಧನಗಳ ಶಕ್ತಿಯಿಂದಾಗಿ ಅನೇಕ ದೇಶಗಳು ಆರ್ಥಿಕವಾಗಿ ಪ್ರಬಲವಾದವು... ಆದರೆ ಅದೇ ಸಮಯದಲ್ಲಿ ಜಗತ್ತಿನ ಪರಿಸರ ದುರ್ಬಲಗೊಂಡಿತು ಎಂದರು.

ಪಳೆಯುಳಿಕೆ ಇಂಧನಗಳಿಗಾಗಿನ ಪೈಪೋಟಿಯಿಂದ ವಿಶ್ವದ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಿದೆ, ಆದರೆ ಇಂದು ತಂತ್ರಜ್ಞಾನ ನಮಗೆ ಉತ್ತಮ ಪರ್ಯಾಯವನ್ನು ತೋರಿಸುತ್ತಿದೆ ಎಂದು ಹೇಳಿದರು. ‘ಜಗತ್ತಿಗೆಲ್ಲಾ ಸೂರ್ಯ ಮೂಲಾಧಾರ ಎಂದು ಸೂರ್ಯೋಪನಿಷತ್ತು ಹೇಳುತ್ತದೆ. ಶಕ್ತಿಯ ಮೂಲ ಭಾನು. ಸೌರಶಕ್ತಿ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆ ಎಂದು ಮೋದಿ ಹೇಳಿದರು. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವವರೆಗೆ ಭೂಮಿ ಸುರಕ್ಷಿತವಾಗಿರಲಿದೆ ಎಂದ ಅವರು , ಆಧುನಿಕ ಯುಗದಲ್ಲಿ ಮುನ್ನಡೆಯುವ ಯಾವಾಗ ಪೈಪೋಟಿ ಆರಂಭವಾಯಿತೊ ... ಆಗ ವಿನಾಶವೂ ಆರಂಭಗೊಂಡಿತು ಎಂದು ಅಭಿಪ್ರಾಯಪಟ್ಟರು. ಸೌರಶಕ್ತಿಯನ್ನು ಎಲ್ಲರಿಗೂ ಲಭ್ಯವಾಗಿಸುವ ಏಕೈಕ ಮಾರ್ಗವೆಂದರೆ ಜಾಗತಿಕ ಸೌರ ಗ್ರಿಡ್ ಸ್ಥಾಪಿಸುವುದು ಎಂದರು

ದ್ವೀಪ ರಾಷ್ಟ್ರಗಳಿಗೆ ಭಾರತ ನೆರವು
ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ಸಣ್ಣ ದೇಶಗಳಿಗೆ ಭಾರತ ಬೆಂಬಲವಾಗಿ ನಿಂತಿದೆ. ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗುತ್ತಿರುವ ಸಣ್ಣ ದ್ವೀಪಸಮೂಹಗಳಂತಹ ದೇಶಗಳಲ್ಲಿ ಮೂಲಸೌಕರ್ಯವನ್ನು ಸೃಷ್ಟಿಸುವ ಗುರಿ ಹೊಂದಿರುವ ಇನ್ಫ್ರಾಸ್ಟ್ರಕ್ಚರ್ ಫಾರ್ ರೆಸಿಲಿಯೆಂಟ್ ಐಲ್ಯಾಂಡ್ ಸ್ಟೇಟ್ಸ್ (IRIS) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು. COP26 ಹವಾಮಾನ ಸಮ್ಮೇಳನದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಗತ್ತಿನ ದೇಶಗಳು ಈಗಾಗಲೇ ಜಾರಿಗೆ ತಂದಿರುವ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ (ಸಿಡಿಆರ್‌ಐ) ಭಾಗವಾಗಿ ಇದು ಕೂಡ ಕೆಲಸಮಾಡಲಿದೆ ಎಂದರು.

SCROLL FOR NEXT