ವಿದೇಶ

ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ: ಇದು 'ಅವಮಾನಕರ' ಎಂದ ಆಸೀಸ್ ಪ್ರಧಾನಿ

Lingaraj Badiger

ಮೆಲ್ಬೋರ್ನ್: ಭಾರತ ಸರ್ಕಾರ ಉಡುಗೊರೆಯಾಗಿ ನೀಡಿದ್ದ ಮತ್ತು ಇತ್ತೀಚಿಗಷ್ಟೇ ಅನಾವರಣಗೊಂಡಿದ್ದ ಮಹಾತ್ಮ ಗಾಂಧಿಯವರ ಬೃಹತ್ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಘಟನೆಯನ್ನು ಬಲವಾಗಿ ಖಂಡಿಸಿದ ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಇದು "ಅವಮಾನಕರ" ಎಂದಿದ್ದಾರೆ. ಅಲ್ಲದೆ ಈ ಘಟನೆಯಿಂದ ಭಾರತೀಯ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಆಘಾತ ಮತ್ತು ನಿರಾಶೆಯನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

ಭಾರತದ 75ನೇ ವರ್ಷದ ಸ್ವಾತಂತ್ರ್ಯ ಆಚರಣೆಯ ಅಂಗವಾಗಿ ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಅವರು ಭಾರತದ ರಾಯಭಾರಿ ರಾಜ್ ಕುಮಾರ್ ಮತ್ತು ಇತರ ಆಸ್ಟ್ರೇಲಿಯಾದ ನಾಯಕರೊಂದಿಗೆ ಕಳೆದ ಶುಕ್ರವಾರ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯಾದ ಭಾರತೀಯ ಸಮುದಾಯ ಕೇಂದ್ರದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. ಆದರೆ ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ ಎಂದು ದಿ ಏಜ್ ಪತ್ರಿಕೆ ವರದಿ ಮಾಡಿದೆ.

"ಈ ಮಟ್ಟದ ಅಗೌರವವನ್ನು ನೋಡುವುದು ಅವಮಾನಕರ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ" ಎಂದು ಮಾರಿಸನ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವದಲ್ಲೇ ಅತ್ಯಂತ ಯಶಸ್ವಿ ಬಹುಸಂಸ್ಕೃತಿ ಮತ್ತು ವಲಸೆ ರಾಷ್ಟ್ರವಾಗಿರುವ ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಸಹಿಸಲಾಗುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಈ ಬೃಹತ್ ಪ್ರತಿಮೆಯನ್ನು ಭಾರತ ಸರ್ಕಾರ ಆಸ್ಟ್ರೇಲಿಯಾಗೆ ಉಡುಗೊರೆಯಾಗಿ ನೀಡಿದೆ.

ಎಬಿಸಿ ನ್ಯೂಸ್ ಪ್ರಕಾರ, ಶುಕ್ರವಾರ ಸಂಜೆ 5.30 ರಿಂದ ಶನಿವಾರ ಸಂಜೆ 5.30 ರ ನಡುವೆ ದುಷ್ಕರ್ಮಿಗಳು ಪ್ರತಿಮೆಯ ಶಿರಚ್ಛೇದ ಮಾಡಲು ವಿದ್ಯುತ್ ಉಪಕರಣವನ್ನು ಬಳಸಿದ್ದಾರೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ.

SCROLL FOR NEXT