ವಿದೇಶ

ಅಲ್ಪಸಂಖ್ಯಾತರಿಗೆ ಪಾಕಿಸ್ತಾನ ನರಕ: ವರ್ಷಕ್ಕೆ ಸಾವಿರ ಹೆಣ್ಮಕ್ಕಳ ಬಲವಂತದ ಮತಾಂತರ

Lingaraj Badiger

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಜೀವನ ನರಕಕ್ಕಿಂತಲೂ ಭೀಕರವಾಗಿದೆ. ಹೆಜ್ಜೆ ಹೆಜ್ಜೆಗೂ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಮಹಿಳೆಯರನ್ನು ಹಿಂಸಿಸಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರೀಕ್ ಸಿಟಿ ಟೈಮ್ಸ್ ವರದಿ ಮಾಡಿದೆ.

ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುವುದು ಪಾಕಿಸ್ತಾನದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕ್ರಿಶ್ಚಿಯನ್ ಹಾಗೂ ಹಿಂದೂ ಧರ್ಮಕ್ಕೆ ಸೇರಿದ 1000ಕ್ಕೂ ಅಧಿಕ ಮಹಿಳೆಯರನ್ನು ಪ್ರತಿ ವರ್ಷ ಒತ್ತಾಯ ಪೂರಕವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಮಾನವ ಹಕ್ಕುಗಳ ಕಾರ್ಯಕರ್ತರಾಗಿರುವ ಆಶಿಕಂಜ್ ಕೋಕರ್ ಪ್ರಕಾರ, ಅಲ್ಪಸಂಖ್ಯಾತ ಧರ್ಮಿಯರಿಗೆ ಸೇರಿದ ಅಪ್ರಾಪ್ತ ಹುಡುಗಿಯರನ್ನು ಕಿಡ್ನಾಪ್ ಮಾಡುವುದು ಇಲ್ಲಿ ಮಾಮೂಲಿನ ಸಂಗತಿಯಾಗಿದೆ ಎಂದು ಗ್ರೀಕ್ ಟೈಮ್ಸ್ ಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಬಗ್ಗೆ ಇಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಮಧ್ಯೆ, ಬಲವಂತದ ಮತಾಂತರ ಕಾನೂನನ್ನು ಜಾರಿಗೊಳಿಸಲು ಇಲ್ಲಿನ ಸಂಸತ್ತು ನಿರಾಕರಿಸಿದೆ ಎಂದು ಕೋಕರ್ ತಿಳಿಸಿದ್ದಾರೆ.

ಈ ಮಧ್ಯೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಮತ್ತೆ ಇಂತಹದ್ದೊಂದು ಘಟನೆ ನಡೆದಿದ್ದು, ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವತಿಯನ್ನು ಅಪಹರಣ ಮಾಡಿರುವ ಬಗ್ಗೆ ವರದಿಯಾಗಿದೆ.

ಬಲೂಚಿಸ್ತಾನ ಪ್ರಾಂತ್ಯದ 12 ವರ್ಷದ ಮೀರಾಬ್ ಅಬ್ಬಾಸ್ ಎಂಬಾಕೆಯನ್ನು ಮೊಹಮ್ಮದ್ ದೌಡ್ ಎಂಬಾತ ಅಪಹರಣ ಮಾಡಿ ಇಸ್ಲಾಂಗೆ ಮತಾಂತರಗೊಳಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರತಿನಿತ್ಯ ಮಹಿಳೆಯರ ಅಪಹರಣ ಪ್ರಕರಣಗಳ ಸಂಖ್ಯೆ ಹೆಚ್ಚಳ ಕಂಡುಬರುತ್ತಿದೆ. 2021ರ ಮೊದಲ 6 ತಿಂಗಳಲ್ಲಿ 6,754 ಮಹಿಳೆಯರನ್ನು ಕಿಡ್ನಾಪ್ ಮಾಡಲಾಗಿದೆ. ಇದರಲ್ಲಿ 1,890 ಮಹಿಳೆಯರ ಮೇಲೆ ಅತ್ಯಾಚಾರ ನಡೆದರೆ, 3,721 ಮಹಿಳೆಯರಿಗೆ ಹಿಂಸೆ ನೀಡಲಾಗಿದೆ. ಇನ್ನುಳಿದ 752 ಮಕ್ಕಳನ್ನು ರೇಪ್ ಮಾಡಲಾಗಿದೆ ಎಂದು ದುನಿಯಾ ನ್ಯೂಸ್ ವರದಿ ಮಾಡಿದೆ.

ಇನ್ನು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 37 ಅತ್ಯಾಚಾರ ಪ್ರಕರಣಗಳು ಸರ್ಕಾರಿ ಮಟ್ಟದಲ್ಲಿ ದಾಖಲಾಗಿದ್ದಾರೆ, ಮಾಧ್ಯಮಗಳಲ್ಲಿ 27 ಘಟನೆಗಳ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಅಧಿಕೃತವಾಗಿ 3,721 ಪ್ರಕರಣಗಳು ದಾಖಲಾಗಿದ್ದರೆ, 938 ಕೇಸ್ ಗಳನ್ನು ಮಾತ್ರ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ.

SCROLL FOR NEXT