ವಿದೇಶ

ಸುಡಾನ್​ನಲ್ಲಿ ಸಂಘರ್ಷ: 43 ಜನ ಸಾವು, 46 ಹಳ್ಳಿಗಳು ಸುಟ್ಟು ಭಸ್ಮ

Lingaraj Badiger

ಖರ್ಟೌಮ್: ಸುಡಾನ್‌ನ ಪಶ್ಚಿಮ ದರ್ಪುರ್​​ ಪ್ರದೇಶದಲ್ಲಿ ಅರಬ್ ದನಗಾಹಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ 43 ಜನ ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವಿಶ್ವಸಂಸ್ಥೆ ಗುರುವಾರ ತಿಳಿಸಿದೆ.

ನವೆಂಬರ್ 17 ರಂದು ಚಾಡ್‌ನ ಗಡಿಗೆ ಸಮೀಪವಿರುವ ಒರಟಾದ ಜೆಬೆಲ್ ಮೂನ್ ಪರ್ವತಗಳಲ್ಲಿ ಶಸ್ತ್ರಸಜ್ಜಿತ ಅರಬ್ ದನಗಾಹಿಗಳ ನಡುವೆ ಹಿಂಸಾಚಾರ ಭುಗಿಲೆದ್ದಿತು ಎಂದು ವೆಸ್ಟ್ ದರ್ಫುರ್ ರಾಜ್ಯದ ಸುಡಾನ್‌ನ ಮಾನವೀಯ ನೆರವು ಕಮಿಷನರ್ ಒಮರ್ ಅಬ್ದೆಲ್ಕರಿಮ್ ಅವರು ಹೇಳಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ, ಕನಿಷ್ಠ 43 ಜನರು ಕೊಲ್ಲಲ್ಪಟ್ಟಿದ್ದಾರೆ, 46 ಹಳ್ಳಿಗಳನ್ನು ಸುಟ್ಟುಹಾಕಲಾಗಿದೆ ಮತ್ತು ಲೂಟಿ ಮಾಡಲಾಗಿದೆ. ಈಗ ನಡೆಯುತ್ತಿರುವ ಹೋರಾಟದಲ್ಲಿ ಅಪರಿಚಿತ ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ಮಕ್ಕಳು ಸೇರಿದಂತೆ ಬಹಳಷ್ಟು ಜನರು ನಾಪತ್ತೆಯಾಗಿದ್ದಾರೆ’ ಎಂದು ಸುಡಾನ್ ಅಧಿಕಾರಿಗಳು ಹೇಳಿದ್ದಾರೆ.

ಸುಡಾನ್‌ನ ಮಾಜಿ ಅಧ್ಯಕ್ಷ ಓಮರ್ ಅಲ್ ಬಶೀರ್ ಅವರ ಕಾಲಾವಧಿ 2003ರಿಂದಲೂ ಈ ನಾಗರಿಕ ಸಂಘರ್ಷ ನಡೆಯುತ್ತಿದೆ. ಏಪ್ರಿಲ್ 11,2019ರಂದು ಅವರು ಅಧಿಕಾರದಿಂದ ಕೆಳಗಿಳಿದರು. 

ಅಕ್ಟೋಬರ್ 3, 2020ರಲ್ಲಿ ದರ್ಫುರ್ ಪ್ರದೇಶದ ಸ್ಥಳಿಯರ ಜೊತೆ ಒಪ್ಪಂದ ಮಾಡಿಸುವ ಮೂಲಕ ಹೊಸ ಸರ್ಕಾರವು ಸಂಘರ್ಷವನ್ನು ಕೊನೆಗೊಳಿಸುವ ಯತ್ನ ನಡೆಸಿತ್ತು. ಆದರೆ, ಇನ್ನೂ ಕೆಲ ಸಂಘಟನೆಗಳು ಒಪ್ಪಂದಕ್ಕೆ ಸಹಿಹಾಕಿಲ್ಲ.‌

ಜೆಬೆಲ್ ಮೂನ್ ಪ್ರದೇಶದಲ್ಲಿ ಸುಮಾರು 66,500 ಮಂದಿ ವಾಸಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, 43,000ಕ್ಕೂ ಅಧಿಕ ಜನರಿಗೆ ಮಾನವೀಯ ನೆಲೆಯಲ್ಲಿ ನೆರವಿನ ಅಗತ್ಯವಿದೆ ಎಂದು 2021ರ ವರದಿ ಹೇಳಿತ್ತು.

SCROLL FOR NEXT