ವಿದೇಶ

ಬಂಡುಕೋರ ಸಂಘಟನೆಯಿಂದ ಅಧಿಕಾರದ ಗದ್ದುಗೆಗೇರಿದ ತಾಲಿಬಾನ್: ಸರ್ಕಾರ ರಚನೆಗೆ ಮುಹೂರ್ತ ಸನ್ನಿಹಿತ

Harshavardhan M

ಕಾಬೂಲ್: ಅಂತಾರಾಷ್ಟ್ರೀಯ ಸಮುದಾಯ ಅಫ್ಘಾನಿಸ್ತಾನ ವಿಷಯದಲ್ಲಿ ಕಾದು ನೋಡುವ ತಂತ್ರ ಅನುಸರಿಸಿತ್ತು. ಇದೇ ತಂತ್ರದ ಲಾಭವನ್ನು ಪಡೆದುಕೊಂದ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಕ್ಷಿಪ್ರ ಗತಿಯಲ್ಲಿ ನಡೆಸಿತು. 

ಸುಳ್ಳಾದ ಅಮೆರಿಕ ಗುಪ್ತಚರ ವರದಿ

ಇನ್ನು 90 ದಿನಗಳಲ್ಲಿ ಅಫ್ಘಾನಿಸ್ತಾನವು ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವರದಿ ಮಾಡಿದ ಒಂದು ವಾರದೊಳಗಾಗಿ ತಾಲಿಬಾನ್ ಕಾಬೂಲನ್ನು ವಶಪಡಿಸಿಕೊಂಡು ಗೆಲುವಿನ ನಗೆ ಬೀರಿತ್ತು. ಆ ಮೂಲಕ ಅಮೆರಿಕ ಗುಪ್ತಚರ ಸಂಸ್ಥೆಯ ವರದಿಯನ್ನು ಬುಡಮೇಲು ಮಾಡಿತ್ತು.

ವಿಶ್ವಸಂಸ್ಥೆ ದೇಶದಲ್ಲಿನ ಮಾನವೀಯ ನೆರವು ಕಾರ್ಯಕ್ರಮಗಳನ್ನು ಜಾರಿಯಲ್ಲಿಡುವುದಾಗಿ ತಿಳಿಸಿತ್ತು. ಚೀನಾ ತನ್ನ ರಾಜತಾಂತ್ರಿಕ ಕಚೇರಿಯನ್ನು ಬಂದ್ ಮಾಡುವುದಿಲ್ಲ ಎಂದು ತಿಳಿಸಿದೆ. ಈ ಹಿಂದೆ ಬ್ರಿಟನ್ ಸೇನಾಧಿಕಾರಿ ಜಗತ್ತು ತಾಲಿಬಾನ್ ಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದ್ದರು. 

ಮಹಿಳೆಯರ ಪ್ರತಿಭಟನೆ

ಗುರುವಾರ ಹೇರತ್ ನಗರದಲ್ಲಿ ಸುಮಾರು 50 ಮಂದಿ ಮಹಿಳೆಯರು ತಾಲಿಬಾನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭತನೆ ನಡೆಸಿರುವ ಅಚ್ಚರಿಯ ಘಟನೆ ನಡೆದಿದೆ. ಶಿಕ್ಷಣ, ವೃತ್ತಿ ಮತ್ತು ಗೌರವ ಮಹಿಳೆಯರ ಮೂಲಭೂತ ಹಕ್ಕು ಎನ್ನುವ ಘೋಷಣೆಗಳನ್ನು ಅವರು ಕೂಗಿದರು ಎಂದು ಮಾಧ್ಯಮಗಳು ವರದಿ ಮಾಡಿವೆ. 

ಕಾಬೂಲ್ ವಿಮಾನ ನಿಲ್ದಾಣವನ್ನು ಮತ್ತೆ ತೆರೆಯುವ ಬಗ್ಗೆ ಕತಾರ್ ತಾಲಿಬಾನ್ ಜೊತೆ ಮಾತುಕತೆಯಲ್ಲಿ ತೊಡಗಿದೆ. ಇಟಲಿ ಮತ್ತಿತರ ರಾಷ್ಟ್ರಗಳು ಅಫ್ಘಾನಿಸ್ತಾನದ ನೆರೆರಾಷ್ಟ್ರಗಳ ಬಳಿ ಆಫ್ಘನ್ ವಲಸಿಗ ಸಮಸ್ಯೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿವೆ. ಒಟ್ಟಿನಲ್ಲಿ ಜಗತ್ತು ತಾಲಿಬಾನ್ ಜೊತೆ ಕಾರ್ಯ ನಿರ್ವಹಿಸುವ ಸಮಯ ಹತ್ತಿರವಾಗುತ್ತಿದೆ ಎಂದು ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ.

SCROLL FOR NEXT