ವಿದೇಶ

ಸಾಂಕ್ರಾಮಿಕ ರೋಗಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆ; ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ಆರೋಗ್ಯ, ಭದ್ರತೆಗೆ ಇನ್ನಷ್ಟು ಪ್ರಯತ್ನ: ಕ್ವಾಡ್ ನಾಯಕರು

Sumana Upadhyaya

ವಾಷಿಂಗ್ಟನ್: ಕೋವಿಡ್-19 ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿ ಮುಂದುವರಿದಿದ್ದು ಈ ಸೋಂಕಿನಿಂದ ಸಾಕಷ್ಟು ಕಷ್ಟ-ನಷ್ಟ, ನೋವು ಸಂಭವಿಸಿದೆ. ಹವಾಮಾನ ಬಿಕ್ಕಟ್ಟು ಮುಂದುವರಿದಿದೆ. ಸ್ಥಳೀಯ ಭದ್ರತೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಈ ಸಮಯ ಎಲ್ಲಾ ದೇಶಗಳಿಗೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರೀಕ್ಷೆಯ ಸಮಯವಾಗಿದೆ, ಆದರೆ ನಮ್ಮ ಸಹಕಾರವು ನಿರಂತರವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ನಿನ್ನೆ ವಾಷಿಂಗ್ಟನ್ ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಕ್ವಾಡ್ ಶೃಂಗಸಭೆ ನಡೆದಿದ್ದು ಸಭೆಯ ಬಳಿಕ ನಾಲ್ಕೂ ದೇಶಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ.

ಸದ್ಯಕ್ಕೆ ಕೋವಿಡ್-19 ಸೋಂಕನ್ನು ಮಟ್ಟಹಾಕುವುದು ಪ್ರಮುಖ ಸವಾಲಾಗಿದೆ. ಈ ಸಂದರ್ಭದಲ್ಲಿ ಕ್ವಾಡ್ ದೇಶಗಳಂತೆ, ನಾವು ಕೊವಾಕ್ಸ್ ಮೂಲಕ ಹಣಕಾಸು ಒದಗಿಸುವುದರ ಜೊತೆಗೆ ಜಾಗತಿಕವಾಗಿ 1.2 ಶತಕೋಟಿಗಿಂತ ಹೆಚ್ಚು ಲಸಿಕೆಗಳನ್ನು ಕೊಡುಗೆಯಾಗಿ ನೀಡಲು ಪ್ರತಿಜ್ಞೆ ಮಾಡಿದ್ದೇವೆ ಎಂದು ಕ್ವಾಡ್ ಸದಸ್ಯ ರಾಷ್ಟ್ರಗಳು ತಿಳಿಸಿವೆ.

ನಿನ್ನೆಯ ಕ್ವಾಡ್ ಸಭೆಯಲ್ಲಿ ಏನು ನಡೆಯಿತು?: ಕ್ವಾಡ್ ಫೆಲೋಶಿಪ್ ಆರಂಭಿಸಲು ನಿರ್ಧರಿಸಲಾಗಿದ್ದು,ಇದರಡಿ ಪ್ರತಿವರ್ಷ 100 ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್ ನೀಡಲಾಗುತ್ತದೆ. ಪ್ರತಿ ಕ್ವಾಡ್ ದೇಶದಿಂದ 25 ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್ ನೀಡಲಾಗುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ಅಮೆರಿಕದ ಪ್ರಮುಖ ಸ್ಟೆಮ್ ಪದವಿ ವಿಶ್ವವಿದ್ಯಾಲಯಗಳಲ್ಲಿ ಓದಲು ಸಹಕಾರಿಯಾಗುತ್ತದೆ.

ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳಿಗೆ ಉತ್ತಮ ಸಿದ್ಧತೆ ನಡೆಸಬೇಕೆಂದು ಕ್ವಾಡ್ ಸಭೆಯಲ್ಲಿ ಮಾತು ನೀಡಲಾಯಿತು. ಇಂಡೋ-ಪೆಸಿಫಿಕ್‌ ಭಾಗದಲ್ಲಿ ಆರೋಗ್ಯ ಹಾಗೂ ಭದ್ರತೆಗೆ ಸಮನ್ವಯತೆ ಸಾಧಿಸುವುದು ಮತ್ತು 2022 ರಲ್ಲಿ ನಾವು ಜಂಟಿಯಾಗಿ ಕನಿಷ್ಠ ಒಂದು ಸಾಂಕ್ರಾಮಿಕ ಸನ್ನದ್ಧತೆಯ ಟೇಬಲ್‌ಟಾಪ್ ಅಥವಾ ಕಾರ್ಯಾಚರಣೆಯನ್ನು ಮಾಡಲು ಸಭೆಯಲ್ಲಿ ತೀರ್ಮಾನ.

ಅಕ್ಟೋಬರ್ ನಿಂದ ಲಸಿಕೆ ರಫ್ತು ಪುನರಾರಂಭಿಸುವ ಭಾರತದ ನಿರ್ಧಾರವನ್ನು ಕ್ವಾಡ್ ಸಭೆಯಲ್ಲಿ ಎಲ್ಲರೂ ಸ್ವಾಗತಿಸಿದರು. ಕ್ವಾಡ್ ಲಸಿಕೆ ಉಪಕ್ರಮಕ್ಕಾಗಿ, ಬಯೋಲಾಜಿಕಲ್-ಇ ಮುಂದಿನ ತಿಂಗಳು ಅಕ್ಟೋಬರ್ ವೇಳೆಗೆ 1 ಮಿಲಿಯನ್ ಡೋಸ್ ಜಾನ್ಸೀನ್ ಲಸಿಕೆಯನ್ನು ಉತ್ಪಾದಿಸಲಿದೆ. ಭಾರತವು ಶೇಕಡಾ 50ರಷ್ಟು ಹಣವನ್ನು ಒದಗಿಸಲಿದೆ. 

SCROLL FOR NEXT