ವಿದೇಶ

ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಿರುವ ಮೊದಲ ದೇಶ ಸ್ಕಾಟ್ಲೆಂಡ್

Ramyashree GN

ಎಡಿನ್‌ಬರ್ಗ್: 2020 ರಲ್ಲಿ ಕಾನೂನೊಂದನ್ನು ಅಂಗೀಕರಿಸಿದ ನಂತರ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಅಗತ್ಯವಿರುವ ಪ್ರತಿಯೊಬ್ಬರಿಗೂ ನೀಡುವ ಮೊದಲ ದೇಶವಾಗಿ ಸ್ಕಾಟ್ಲೆಂಡ್ ಸೋಮವಾರ ಹೊರಹೊಮ್ಮಲಿದೆ.

ಕೌನ್ಸಿಲ್‌ಗಳು ಮತ್ತು ಶಿಕ್ಷಣ ಪೂರೈಕೆದಾರರು ಈ ಉತ್ಪನ್ನಗಳನ್ನು ಅಗತ್ಯವಿರುವ ಯಾರಿಗಾದರೂ ಉಚಿತವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದನ್ನು ಕಾನೂನಿನ ಅಡಿಯಲ್ಲಿ ತರಲಾಗಿದೆ ಎಂದು ಸ್ಕಾಟಿಷ್ ಸರ್ಕಾರ ಭಾನುವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

'ಮುಟ್ಟಿನ ಅವಧಿಯಲ್ಲಿ ಬಳಸುವ ಉತ್ಪನ್ನಗಳು ಉಚಿತವಾಗಿ ಲಭ್ಯವಾಗುವಂತೆ ಮಾಡುವುದು ಮೂಲಭೂತ ಸಮಾನತೆ ಮತ್ತು ಘನತೆಗೆ ಅಗತ್ಯವಾಗಿದೆ ಮತ್ತು ಅವುಗಳನ್ನು ಪಡೆದುಕೊಳ್ಳಲು ಎದುರಾಗುವ ಹಣಕಾಸಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ' ಎಂದು ಸಾಮಾಜಿಕ ನ್ಯಾಯ ಕಾರ್ಯದರ್ಶಿ ಶೋನಾ ರಾಬಿಸನ್ ಹೇಳಿದರು.

ಇಂತಹ ಕ್ರಮ ಕೈಗೊಂಡ ವಿಶ್ವದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ನಮಗಿದೆ ಎಂದೂ ಅವರು ಹೇಳಿದರು.
ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎನ್ನುವ ಮಸೂದೆಯ ಪರವಾಗಿ ಸ್ಕಾಟಿಷ್ ಸಂಸತ್ತು ಸರ್ವಾನುಮತದಿಂದ ಮತ ಹಾಕಿತು. 2020ರ ನವೆಂಬರ್‌ನಲ್ಲಿ ಸಾರ್ವಜನಿಕ ಕಟ್ಟಡಗಳಲ್ಲಿ ನೈರ್ಮಲ್ಯ ಉತ್ಪನ್ನಗಳನ್ನು ಉಚಿತವಾಗಿ ನೀಡಲು ಕಾನೂನುಬದ್ಧ ಹಕ್ಕನ್ನಾಗಿ ಮಾಡಿತು.

ಸ್ಯಾನಿಟರಿ ಪ್ಯಾಡ್‌ಗಳು ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಆದರೆ, ಈ ಮಸೂದೆಯು ಸಚಿವರ ಮೇಲೆ ಕಾನೂನು ಕರ್ತವ್ಯವನ್ನು ಹೊರಿಸುತ್ತಿದ್ದು, ಅವುಗಳನ್ನು ಅಗತ್ಯವಿರುವ ಯಾರಿಗಾದರೂ ದೊರಕುವಂತೆ ಮಾಡಬೇಕು ಎಂಬುದನ್ನು ಖಚಿತಪಡಿಸುತ್ತದೆ.

'ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಮಹಿಳೆಯರ ಶೌಚಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು' ಎಂದು ಕಾನೂನು ಹೇಳುತ್ತದೆ.

'ಈ ಅದ್ಭುತ ಕಾನೂನಿಗಾಗಿ ಮತ ಚಲಾಯಿಸಲು ಹೆಮ್ಮೆಪಡುತ್ತೇನೆ. ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸುವ ವಿಶ್ವದ ಮೊದಲ ದೇಶವಾಗಿ ಸ್ಕಾಟ್ಲೆಂಡ್ ಹೊರಹೊಮ್ಮಿದೆ. ಮಹಿಳೆಯರು ಮತ್ತು ಹುಡುಗಿಯರಿಗೆ ಪ್ರಮುಖ ನೀತಿಯಾಗಿದೆ' ಎಂದು ಸ್ಕಾಟ್ಲೆಂಡ್‌ನ ಮೊದಲ ಮಹಿಳಾ ಸಚಿವೆ ನಿಕೋಲಾ ಸ್ಟರ್ಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದಾರೆ.

SCROLL FOR NEXT