ವಿದೇಶ

ಮಾಸ್ಕೋ ಶಾಪಿಂಗ್ ಸೆಂಟರ್‌ನಲ್ಲಿ ಭಾರೀ ಬೆಂಕಿ; 1 ಸಾವು, 7,000 ಚದರ ಮೀಟರ್ ವ್ಯಾಪ್ತಿಯಲ್ಲಿ ವ್ಯಾಪಿಸಿರುವ ಜ್ವಾಲೆ

Srinivasamurthy VN

ಮಾಸ್ಕೋ: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮಾಸ್ಕೋ ಶಾಪಿಂಗ್ ಸೆಂಟರ್‌ನಲ್ಲಿ ಸಂಭವಿಸಿರುವ ಬೆಂಕಿ ಅನಾಹುತಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ರಷ್ಯಾ ರಾಜಧಾನಿ ಮಾಸ್ಕೋದ ಉತ್ತರ ಉಪನಗರವಾದ ಖಿಮ್ಕಿಯಲ್ಲಿರುವ ಮೆಗಾ ಖಿಮ್ಕಿ ಶಾಪಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆ ಬರೊಬ್ಬರಿ 7000 ಚದರ ಅಡಿಯಲ್ಲಿ ವ್ಯಾಪಿಸಿದೆ. ಬೆಂಕಿ ನಂದಿಸಲು ನೂರಾರು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸಪಡುತ್ತಿವೆ. ಒಂದು ಫುಟ್ ಬಾಲ್ ಮೈದಾನದಷ್ಟು ಜಾಗದಲ್ಲಿ ಬೆಂಕಿ ಕೆನ್ನಾಲಿಗೆ ಚಾಚಿಕೊಂಡಿದ್ದು, ಮೇಲ್ನೋಟಕ್ಕೆ ಅಗ್ನಿ ಅವಘಡದ ಹಿಂದೆ ದುಷ್ಕರ್ಮಿಗಳ ಕೈವಾಡದ ಕುರಿತು ತನಿಖಾ ಸಂಸ್ಥೆಗಳು ಸಂದೇಹ ವ್ಯಕ್ತಪಡಿಸಿವೆ. ಇದೊಂದು ಉದ್ದೇಶಪೂರ್ವಕ ನಡೆದ ಕೃತ್ಯ ಎಂದು ಇಂಟರ್‌ಫ್ಯಾಕ್ಸ್ ಸುದ್ದಿ ಸಂಸ್ಥೆ ತಿಳಿಸಿದ್ದು. ಬೆಂಕಿ ಹಚ್ಚಿದ್ದೇ ಈ ಘಟನೆಗೆ ಕಾರಣವೆಂದು ಶಂಕಿಸಲಾಗಿದೆ ಎಂದು ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮಾಸ್ಕೋ ಪ್ರದೇಶದ ತುರ್ತು ಸೇವೆಗಳ ಮುಖ್ಯಸ್ಥ ಸೆರ್ಗೆಯ್ ಪೊಲೆಟಿಕಿನ್ ಅವರು, ಬೆಳಿಗ್ಗೆ 10:45 ಕ್ಕೆ (0735 GMT) ಬೆಂಕಿಯನ್ನು ನಂದಿಸಲಾಯಿತು.. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಶಾಪಿಂಗ್ ಮಾಲ್ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡದ ಭಾಗ ಭಾಗಶಃ ಕುಸಿದಿದೆ.ಕಟ್ಟಡದಲ್ಲಿ ಹವರು ಸಿಲುಕಿರುವ ಶಂಕೆ ಇದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ತನಿಖಾಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿದ್ದಾರೆ" ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಖಿಮ್ಕಿ ಉಪನಗರದಲ್ಲಿ ಬೆಂಕಿ 7,000 ಚದರ ಮೀಟರ್ (75,300 ಚದರ ಅಡಿ) ವರೆಗೆ ವ್ಯಾಪಿಸಿದೆ ಎಂದು ತುರ್ತು ಸೇವೆಗಳ ಅಧಿಕಾರಿಗಳು ತಿಳಿಸಿದ್ದಾರೆ. ಈ ಶಾಪಿಂಗ್ ಸೆಂಟರ್ ಮಾಸ್ಕೋದ ಶೆರೆಮೆಟಿಯೆವೊ ವಿಮಾನ ನಿಲ್ದಾಣದಿಂದ ಸುಮಾರು ಏಳು ಕಿಲೋಮೀಟರ್ (ನಾಲ್ಕು ಮೈಲುಗಳು) ದೂರದಲ್ಲಿದೆ. 70 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು 20 ಅಗ್ನಿಶಾಮಕ ಟ್ರಕ್‌ಗಳು ಸ್ಥಳದಲ್ಲಿದ್ದು, ತುರ್ತು ಸೇವೆಗಳು ಕಟ್ಟಡದ ವಿನ್ಯಾಸದಿಂದಾಗಿ ಅವರ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಹೇಳಿದರು.

ಕಳೆದ ತಿಂಗಳು, ಕೋಸ್ಟ್ರೋಮಾ ನಗರದ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡು 13 ಜನರು ಸಾವನ್ನಪ್ಪಿದರು. ಕುಡುಕನೊಬ್ಬ ಫ್ಲೇರ್ ಗನ್ ಅನ್ನು ಮನೆಯೊಳಗೆ ಹಾರಿಸಿದ್ದಾನೆ ಎಂದು ವರದಿಯಾಗಿದೆ. ಆದರೆ ಅಸಮರ್ಪಕ ಅಗ್ನಿ ಸುರಕ್ಷತಾ ನಿಯಮಗಳು ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018 ರಲ್ಲಿ, ಸೈಬೀರಿಯಾದ ಕೆಮೆರೊವೊ ನಗರದ ಶಾಪಿಂಗ್ ಮಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು 60 ಜನರು ಸಾವನ್ನಪ್ಪಿದ್ದರು. ಅಂತೆಯೇ 2009 ರಲ್ಲಿ, ಯುರಲ್ಸ್ ನಗರದ ಪೆರ್ಮ್‌ನಲ್ಲಿರುವ ನೈಟ್‌ಕ್ಲಬ್‌ನಲ್ಲಿ ಮತ್ತೊಂದು ಬೆಂಕಿ ದುರಂತದಲ್ಲಿ 156 ಮಂದಿ ಸಾವಿಗೀಡಾಗಿದ್ದರು.
 

SCROLL FOR NEXT