ವಿದೇಶ

ರಾಜಿನಾಮೆ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ಕಿತ್ತುಹಾಕಲು ಬೇರೆ ದಾರಿ ಪರಿಗಣಿಸಬೇಕಾಗುತ್ತದೆ: ರಾಜಪಕ್ಸೆಗೆ ಶ್ರೀಲಂಕಾ ಸ್ಪೀಕರ್

Vishwanath S

ಕೊಲಂಬೊ: ಆದಷ್ಟು ಬೇಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ. ಇಲ್ಲದಿದ್ದರೆ ನಿಮ್ಮನ್ನು ಕಚೇರಿಯಿಂದ ತೆಗೆದುಹಾಕಲು ಇತರ ಆಯ್ಕೆಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಶ್ರೀಲಂಕಾದ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಅವರು ಗೋತಬಯ ರಾಜಪಕ್ಸೆಗೆ ಎಚ್ಚರಿಕೆ ನೀಡಿದ್ದಾರೆ. 

ಕಳೆದ ಬುಧವಾರ ಸಂಸತ್ತಿನ ಸ್ಪೀಕರ್ ಅವರು ದೂರವಾಣಿ ಕರೆ ಮಾಡಿದಾಗ ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಗುರುವಾರ ಸಲ್ಲಿಸುವುದಾಗಿ ತಿಳಿಸಿದ್ದರೂ ಆದರೆ ಇಲ್ಲಿಯವರೆಗೂ ಅದನ್ನು ಮಾಡಿಲ್ಲ. ಹೀಗಾಗಿ ಅಧ್ಯಕ್ಷ ರಾಜಪಕ್ಸೆ ಅವರಿಗೆ ರಾಜೀನಾಮೆ ಪತ್ರವನ್ನು ಆದಷ್ಟು ಬೇಗ ಸಲ್ಲಿಸುವಂತೆ ತಿಳಿಸಿರುವುದಾಗಿ ಸ್ಪೀಕರ್ ಅಬೇವರ್ಧನ ಹೇಳಿದ್ದಾರೆ.

ಹಂಗಾಮಿ ಅಧ್ಯಕ್ಷರನ್ನು ನೇಮಿಸಿರುವುದರಿಂದ, ಅಧ್ಯಕ್ಷರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸದಿದ್ದರೂ 'ತಮ್ಮ ಸ್ಥಾನವನ್ನು ತೊರೆದಿದ್ದಾರೆ' ಎಂಬ ಆಯ್ಕೆಯನ್ನು ಪರಿಗಣಿಸಲು ಸ್ಪೀಕರ್ ಕಚೇರಿ ಕಾನೂನು ನಿಬಂಧನೆಗಳನ್ನು ಅನ್ವೇಷಿಸಲಿದೆ ಎಂದು ಅಬೇವರ್ಧನ ಹೇಳಿದ್ದಾರೆ.

ಅಧ್ಯಕ್ಷರು ಇನ್ನೂ ತಮ್ಮ ರಾಜೀನಾಮೆ ಪತ್ರವನ್ನು ನೀಡಿಲ್ಲ. ಹೀಗಾಗಿ ಶುಕ್ರವಾರ ಸಂಸತ್ತಿನ ಸಭೆ ನಡೆಯುವುದು ಖಚಿತವಾಗಿಲ್ಲ ಎಂದು ಶ್ರೀಲಂಕಾ ಸಂಸತ್ತಿನ ವಕ್ತಾರರು ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳೆರಡಕ್ಕೂ ಒಪ್ಪಿಗೆಯಾಗುವ ಪ್ರಧಾನಿಯನ್ನು ನಾಮನಿರ್ದೇಶನ ಮಾಡುವಂತೆ ಹಂಗಾಮಿ ಅಧ್ಯಕ್ಷರು ರನಿಲ್ ವಿಕ್ರಮಸಿಂಘೆ ಸ್ಪೀಕರ್ ಅಬೇವರ್ಧನ ಅವರಿಗೆ ಸೂಚಿಸಿದ್ದಾರೆ ಎಂದು ಪ್ರಧಾನಮಂತ್ರಿ ಮಾಧ್ಯಮ ವಿಭಾಗ ತಿಳಿಸಿದೆ. .

ರಾಜಪಕ್ಸೆ ಅವರು ದೇಶದಿಂದ ಪಲಾಯನ ಮಾಡಿದ ನಂತರ ಬುಧವಾರ ಪ್ರಧಾನಿ ಕಚೇರಿಯಲ್ಲಿ ಮತ್ತು ಸಂಸತ್ತಿನ ಮುಖ್ಯ ಪ್ರವೇಶ ಜಂಕ್ಷನ್‌ನಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ 84 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.

22 ಮಿಲಿಯನ್ ಜನರಿರುವ ಶ್ರೀಲಂಕಾ ಭೀಕರ ಆರ್ಥಿಕ ಪ್ರಕ್ಷುಬ್ಧತೆಯಲ್ಲಿದೆ. ಏಳು ದಶಕಗಳಲ್ಲೇ ಇದು ಅತ್ಯಂತ ಕೆಟ್ಟ ಪರಿಸ್ಥಿತಿಯಾಗಿದ್ದು ಲಕ್ಷಾಂತರ ಜನರು ಆಹಾರ, ಔಷಧ, ಇಂಧನ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗಾಡುತ್ತಿದ್ದಾರೆ.

ಕಳೆದ ವಾರ, ಪ್ರಧಾನಿ ವಿಕ್ರಮಸಿಂಘೆ ಅವರು ಶ್ರೀಲಂಕಾ ಈಗ ದಿವಾಳಿಯಾದ ದೇಶವಾಗಿದೆ ಎಂದು ಘೋಷಿಸಿದ್ದರು.

SCROLL FOR NEXT