ವಿದೇಶ

ಎಸ್ ಸಿಒ ಸಭೆ: 2019 ರ ನಂತರ ಭಾರತದೊಂದಿಗೆ ರಚನಾತ್ಮಕ ಮಾತುಕತೆ ಕಷ್ಟವಾಗಿದೆ:  ಪಾಕ್ ವಿದೇಶಾಂಗ ಸಚಿವ ಬಿಲಾವಲ್

Nagaraja AB

ಇಸ್ಲಾಮಾಬಾದ್: 2019ರ ನಂತರ ಭಾರತದ ಜೊತೆಗೆ ರಚನಾತ್ಮಕ ಮಾತುಕತೆ ಕಷ್ಟಕರವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ತಾಷ್ಕೆಂಟ್ ನಲ್ಲಿ ನಡೆದ ಶಾಂಘೈ ಸಹಕಾರ ಸಂಘದ(ಎಸ್ ಸಿಒ) ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಉಭಯ ರಾಷ್ಟ್ರಗಳು ಸಂಘಟನೆಯ ಉದ್ದೇಶದ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದರು. ಭಾರತ ನಮ್ಮ ನೆರೆಯ ರಾಷ್ಟ್ರವಾಗಿದ್ದು, ನಾವು ಅವರೊಂದಿಗೆ ಬದುಕಲು ಒಗ್ಗಿಕೊಳ್ಳಬೇಕು ಎಂದಿದ್ದಾರೆ.

ಭಾರತ ಸರ್ಕಾರ ಜಮ್ಮು-ಕಾಶ್ನೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಹಿಂಪಡೆದು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಉಲ್ಲೇಖಿಸಿದ ಬಿಲಾವಲ್, 2019ರ ನಂತರ ರಚನಾತ್ಮಕ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಇಸ್ಲಾಮಾಬಾದ್‌ನೊಂದಿಗೆ ಸಾಮಾನ್ಯ ನೆರೆಯ ಸಂಬಂಧಗಳನ್ನು ಬಯಸುವುದಾಗಿ ಭಾರತವು ಪಾಕಿಸ್ತಾನಕ್ಕೆ ಪದೇ ಪದೇ ಹೇಳುತ್ತಿದೆ. ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಹೇಳಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಶಾಂಘೈ ಸಹಕಾರ ಸಭೆಯಲ್ಲಿ ಪಾಲ್ಗೊಂಡರು. 

SCROLL FOR NEXT