ವಿದೇಶ

ಇಸ್ತಾನ್ಬುಲ್‌ ಬಾಂಬ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, ಶಂಕಿತ ವಶಕ್ಕೆ

Manjula VN

ಟರ್ಕಿ: ಟರ್ಕಿಯ ಇಸ್ತಾನ್ಬುಲ್‌ನ ಪ್ರಸಿದ್ಧ ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಡಿಸಿದ್ದಾರೆಂದು ತಿಳಿದುಬಂದಿದೆ.

ಇಸ್ತಿಕ್‌ಲಾಲ್ ಶಾಪಿಂಗ್ ಸ್ಟ್ರೀಟ್‌ ಯಾವಾಗಲೂ ಪ್ರವಾಸಿಗರಿಂದ ತುಂಬಿರುವ ಸ್ಥಳವಾಗಿದೆ. ಈ ಪ್ರದೇಶದಲ್ಲಿ ನಿನ್ನೆ ಉಗ್ರರು ಬಾಂಬ್ ಸ್ಫೋಟಿಸಿದ್ದರು. ಘಟನೆಯಲ್ಲಿ 81ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಾಂಬ್ ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಸುಮಾರು 40 ನಿಮಿಷಗಳ ಕಾಲ ಬೆಂಚ್ ಮೇಲೆ ಕುಳಿತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಆಕೆ ಈ ಬಾಂಬ್ ಸ್ಫೋಟ ನಡೆಯುವುದಕ್ಕೂ ಕೆಲವೇ ನಿಮಿಷಗಳ ಮೊದಲು ಆ ಜಾಗದಿಂದ ಹೊರಟುಹೋಗಿದ್ದಾಳೆ. ಇಬ್ಬರು ಪುರುಷ ದಾಳಿಕೋರರು ಸಹ ಆ ಮಹಿಳೆಯೊಂದಿಗೆ ಸೇರಿ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಸ್ಫೋಟದಲ್ಲಿ ಸಾವನ್ನಪ್ಪಿದವರಲ್ಲಿ ಓರ್ವ ಸರ್ಕಾರಿ ಅಧಿಕಾರಿ ಮತ್ತು ಅವರ ಚಿಕ್ಕ ಮಗಳು ಕೂಡ ಸೇರಿದ್ದಾರೆಂದು ತಿಳಿದುಬಂದಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಪ್ಯಾರಿಸ್ ಕೆಫೆಯಲ್ಲಿ 130 ಜನರ ಮೇಲೆ ಗುಂಡು ಹಾರಿಸಿ ಕೊಂದ 7 ವರ್ಷಗಳ ನಂತರ ಈ ಭಯೋತ್ಪಾದಕ ದಾಳಿ ನಡೆದಿದೆ.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಾತನಾಡಿ, 'ನಾವು ಇದನ್ನು ಭಯೋತ್ಪಾದನೆಯ ಕೃತ್ಯವೆಂದು ಪರಿಗಣಿಸುತ್ತೇವೆ. ಮಹಿಳೆಯೊಬ್ಬರು ಈ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯ ಮೂಲಕ ತಿಳಿದು ಬಂದಿದೆ' ಎಂದು ತಿಳಿಸಿದ್ದಾರೆ.

ಭಾರತ ಸಂತಾಪ
ಇಸ್ತಾನ್ಬುಲ್‌ನಲ್ಲಿ ಬಾಂಬ್​ ಸ್ಫೋಟಗೊಂಡು ಸಂಭವಿಸಿದ ಸಾವುಗಳ ಬಗ್ಗೆ ಭಾರತವು ಟರ್ಕಿ ಸರ್ಕಾರ ಮತ್ತು ಜನರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.

ಸಾವಿಗೀಡಾದ ಕುಟುಂಬದ ಜತೆ ನಮ್ಮ ಸಹಾನುಭೂತಿ ಇದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್​ ಮಾಡಿದ್ದಾರೆ.

SCROLL FOR NEXT