ವಿದೇಶ

ಇರಾನ್‍ನಲ್ಲಿ ಹಿಜಾಬ್ ಪ್ರತಿಭಟನೆ: ಮೆಟ್ರೋದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಗುಂಡಿನ ದಾಳಿ; ಕಾಲ್ತುಳಿತ, ಹಲವರಿಗೆ ಗಾಯ

Srinivasamurthy VN

ಟೆಹ್ರಾನ್: ಇರಾನ್‍ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ಮೆಟ್ರೋ ನಿಲ್ದಾಣಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ರಾಜಧಾನಿ ಟೆಹ್ರಾನ್ ನ ಮೆಟ್ರೋ ನಿಲ್ದಾಣದಲ್ಲಿ (Metro Station) ಇರಾನ್ ಭದ್ರತಾ ಪಡೆಗಳು ಹಿಜಬ್ ವಿರೋಧಿ ಪ್ರತಿಭಟನಾಕಾರರ (Anti Hijab Protest) ಮೇಲೆ ಗುಂಡಿನ ದಾಳಿ ನಡೆಸಿದೆ. ಮಹ್ಸಾ ಅಮಿನಿಯ ( Mahsa Amini ) ಸಾವನ್ನು ವಿರೋಧಿಸಿ ಇರಾನ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ 3 ತಿಂಗಳಿಗೆ ತಲುಪಿದೆ. ಇರಾನ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದರ ನಡುವೆ ಪ್ರತಿಭಟನಾಕಾರರು ಮೆಟ್ರೋ ನಿಲ್ದಾಣಗಳಲ್ಲಿ ಹಿಜಬ್‍ಗೆ ಬೆಂಕಿ ಹಚ್ಚುತ್ತಿರುವುದು ಕಂಡುಬಂದಿತು. 

ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದಾಗ ಜನರು ಅಲ್ಲಿಂದ ಓಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ರೈಲಿನೊಳಗೆ ಅಧಿಕಾರಿಗಳು ಮಹಿಳೆಯರನ್ನು ಲಾಠಿಗಳಿಂದ ಹೊಡೆದಿದ್ದಾರೆ. ಘಟನೆ ವೇಳೆ ಅನೇಕ ಜನರು ಬಿದ್ದು, ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಇರಾನ್ ದೇಶಲ್ಲಿ ಹಿಜಬ್ ಅನ್ನು ವಿರೋಧಿಸಿ ನಿರಂತರವಾಗಿ ಅಶಾಂತಿ ಮುಂದುವರಿದಿದ್ದು, ಸರ್ಕಾರಿ ವಿರೋಧಿ ಪ್ರತಿಭಟನೆ ನಡೆಸಿರುವ ಆರೋಪದಲ್ಲಿ ಕೆಲವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. 

ಕ್ಲೆರಿಕಲ್ ಆಡಳಿತವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿರುವವರನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಮೊದಲ ಬಾರಿಗೆ ಮರಣದಂಡನೆ ವಿಧಿಸಿದೆ. ಇರಾನ್ ರಾಜಧಾನಿ ಟೆಹರಾನ್ ನಲ್ಲಿ ತಲೆಗೆ ಹಿಜಬ್ ಸರಿಯಾಗಿ ಧರಿಸದೇ ಇದ್ದಿದ್ದಕ್ಕೆ ಮಹ್ಸಾ ಅಮಿನಿಯನ್ನು ನೈತಿಕ ಪೊಲೀಸರು ಬಂಧಿಸಿದ್ದರು. ಪೊಲೀಸ್ ಬಂಧನದ ವೇಳೆ ಮಹ್ಸಾ ಸಾವನ್ನಪ್ಪಿದ್ದಳು. ಈಕೆಗೆ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇರಾನ್ ಸರ್ಕಾರದ ವಿರುದ್ಧ ಮಹಿಳೆಯರು, ಮಕ್ಕಳು ಬೀದಿಗೆ ಇಳಿದು ಹೋರಾಟ ಆರಂಭಿಸಿ ಮೂರು ತಿಂಗಳೂ ಕಳೆದಿವೆ. 
 

SCROLL FOR NEXT