ವಿದೇಶ

ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ದೂರ ಉಳಿದ ಭಾರತ

Srinivas Rao BV

ನ್ಯೂಯಾರ್ಕ್: ಉಕ್ರೇನ್ ನ 4 ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದು ಹಾಗೂ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಿರುವುದನ್ನು ಖಂಡಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿದೆ. 

ರಷ್ಯಾ ವಿರುದ್ಧ ಯುಎನ್ಎಸ್ ಸಿಯಲ್ಲಿ ನಿರ್ಣಯ ಮಂಡಿಸಿದ್ದ  ಅಮೆರಿಕ ಮತ್ತು ಅಲ್ಬೇನಿಯಾ ರಷ್ಯಾ ತನ್ನ ಸೇನಾ ಪಡೆಗಳನ್ನು ಉಕ್ರೇನ್‌ನಿಂದ ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಿದ್ದವು.

ಉಕ್ರೇನ್‌ ನ ಕೆರ್ಸಾನ್‌, ಝಪೋರಿಝಿಯಾ, ಲುಹಾನ್‌ಸ್ಕ್‌, ಡೊನೆಟ್‌ಸ್ಕ್‌ ಪ್ರದೇಶಗಳನ್ನು ರಷ್ಯಾಕ್ಕೆ ಸೇರ್ಪಡೆ ಮಾಡಿಕೊಳ್ಳುವ ಒಪ್ಪಂದಕ್ಕೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಶುಕ್ರವಾರ ಸಹಿ ಹಾಕಿದ್ದರು. ಈ ಬೆನ್ನಲ್ಲೇ ಅಮೇರಿಕ ಮಂಡಿಸಿದ್ದ ನಿರ್ಣಯದಲ್ಲಿ ರಷ್ಯಾ ತನ್ನ ಮೇಲೆ ಬಂದಿದ್ದ ಆರೋಪಗಳನ್ನು ವಿಟೊ ಅಧಿಕಾರ ಬಳಸಿ ನಿರಾಕರಿಸಿದೆ.

ಭದ್ರತಾ ಮಂಡಳಿಯ 15 ರಾಷ್ಟ್ರಗಳ ಪೈಕಿ 10 ರಾಷ್ಟ್ರಗಳು ಮಾತ್ರವೇ ನಿರ್ಣಯಕ್ಕೆ ಸಂಬಂಧಿಸಿದಂತೆ ಮತ ಚಲಾವಣೆ ಮಾಡಿದವು. ಭಾರತ ಸೇರಿ 4 ರಾಷ್ಟ್ರಗಳು ಮತ ಹಾಕುವುದರಿಂದ ದೂರ ಉಳಿದವು. ಪರಿಣಾಮ ನಿರ್ಣಯ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿದೆ.

ಬಲಪ್ರಯೋಗದಿಂದ ಯಾವುದೇ ರಾಷ್ಟ್ರ ಮತ್ತೊಂದು ರಾಷ್ಟ್ರದ ಪ್ರದೇಶವನ್ನು ಆಕ್ರಮಿಸಿಕೊಳ್ಳುವುದು ವಿಶ್ವಸಂಸ್ಥೆಯ ತತ್ವಗಳಿಗೆ ವಿರುದ್ಧವಾಗಿದೆ. ರಷ್ಯಾ ಮಾಡಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. ರಷ್ಯಾದ ನಡೆ ಅಪಾಯಕಾರಿಯಾಗಿದ್ದು ಆಧುನಿಕ ಜಗತ್ತಿನಲ್ಲಿ ಇದಕ್ಕೆ ಅವಕಾಶವಿಲ್ಲ. ರಷ್ಯಾದ ಕ್ರಮ ಒಪ್ಪಿಕೊಳ್ಳುವಂಥಹದ್ದಲ್ಲ ಎಂದು ಅವರು ಹೇಳಿದರು.

ಭಾರತದ ಪ್ರತಿಕ್ರಿಯೆ

"ಮತ ಪ್ರತಿಕ್ರಿಯೆ ಮುಕ್ತಾಯಗೊಂಡ ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ಅಧಿಕಾರಿ ರುಚಿರಾ ಕಾಂಬೋಜ್, ಉಕ್ರೇನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತ ತೀವ್ರವಾಗಿ ಕದಡಿದೆ. ಮನುಷ್ಯರ ಜೀವದ ಬೆಲೆ ತೆತ್ತು ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಭಾರತ ಲಗಾಯ್ತಿನಿಂದಲೂ ಹೇಳುತ್ತಿದೆ. 

ಉಭಯ ಪಕ್ಷಗಳೂ ಹಿಂಸೆ ಮತ್ತು ಹಗೆತನದ ತಕ್ಷಣದ ನಿಲುಗಡೆಗೆ ಶ್ರಮಿಸಬೇಕೆಂದು ಭಾರತ ಒತ್ತಾಯಿಸುತ್ತದೆ. ಭಿನ್ನಾಭಿಪ್ರಾಯ ಹಾಗೂ ವಿವಾದಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾತುಕತೆಯೊಂದೇ ಮಾರ್ಗ" ಎಂದು ರುಚಿರಾ ಕಾಂಬೋಜ್ ಹೇಳಿದ್ದಾರೆ.

SCROLL FOR NEXT