ವಿದೇಶ

ಅಮೆರಿಕ ವಿಮಾನ ನಿಲ್ದಾಣದಲ್ಲಿ ಪಾಕ್ ಸಚಿವರಿಗೆ ಘೇರಾವ್; ಸುಳ್ಳುಗಾರ, ಚೋರ್ ಎಂದು ಗೇಲಿ

Lingaraj Badiger

ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್ ಅವರಿಗೆ ಘೇರಾವ್ ಹಾಕಿ, ಕಳ್ಳ, ಕಳ್ಳ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ.

ಜಾಗತಿಕವಾಗಿ ಸಾಲ ನೀಡುವ ಸಂಸ್ಥೆಗಳೊಂದಿಗೆ ನಡೆಯುವ ಸಭೆಗಳಲ್ಲಿ ಭಾಗವಹಿಸಲು ಮತ್ತು ನಗದು ಕೊರತೆ ಹಾಗೂ ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ಅಗತ್ಯವಿರುವ ನೆರವು ಪಡೆಯಲು ವಾಷಿಂಗ್ಟನ್‌ಗೆ ಆಗಮಿಸಿದ ಪಾಕ್ ಹಣಕಾಸು ಸಚಿವ ಇಶಾಕ್ ದಾರ್ ಅವರನ್ನು ಡಲ್ಲೆಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು ಘೇರಾವ್ ಹಾಕಿದರು.

ಈ ವಿಡಿಯೋ ವೈರಲ್ ಆಗಿದ್ದು, ಹಣಕಾಸು ಸಚಿವ ದಾರ್ ಅವರೊಂದಿಗೆ ಯುಎಸ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮಸೂದ್ ಖಾನ್ ಮತ್ತು ಇತರ ಅಧಿಕಾರಿಗಳಿದ್ದು, ವಿಮಾನ ನಿಲ್ದಾಣದಲ್ಲಿ ಅವರಿಗೆ ಗೇಲಿ ಮಾಡಲಾಗಿದೆ.

ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ದಾರ್ ಕಡೆಗೆ “ನೀವು ಸುಳ್ಳುಗಾರ, ನೀವು ಚೋರ್” ಎಂದು ಕೂಗುವುದನ್ನು ಕೇಳಬಹುದು. ವ್ಯಕ್ತಿಗೆ ಪ್ರತ್ಯುತ್ತರವಾಗಿ  ದಾರ್ “ನೀನು ಸುಳ್ಳುಗಾರ” ಎಂದು ಹೇಳುತ್ತಾರೆ. ಜೊತೆಗಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ನಾಯಕರು ಸಹ, ವ್ಯಕ್ತಿಯೊಂದಿಗೆ ಅಶ್ಲೀಲ ಮಾತುಗಳಿಂದ ಚಕಮಕಿ ನಡೆಸುತ್ತಿರುವುದನ್ನು ಕಾಣಬಹುದು.

72 ವರ್ಷದ ದಾರ್ ಅವರು ಇತ್ತೀಚೆಗೆ ಪಾಕಿಸ್ತಾನದ ಹಣಕಾಸು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ವಿಶ್ವಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ಯುಎಸ್‌ನಲ್ಲಿದ್ದಾರೆ.

ಪಾಕಿಸ್ತಾನ ಸಚಿವರನ್ನು ವಿದೇಶ ಪ್ರವಾಸಗಳಲ್ಲಿ ಮತ್ತು ದೇಶದೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಗೇಲಿ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು  ವಾರ್ತಾ ಸಚಿವ ಮರಿಯುಮ್ ಔರಂಗಜೇಬ್ ಅವರನ್ನು ಲಂಡನ್‌ನ ಕಾಫಿ ಶಾಪ್‌ನಲ್ಲಿ ಥಳಿಸಲಾಗಿತ್ತು.

SCROLL FOR NEXT